ತುಮಕೂರು:
ತುಮಕೂರು ನಗರದ ವ್ಯಾಪ್ತಿಯಲ್ಲಿನ ರೌಡಿಗಳಿಗೆ ಶುಕ್ರವಾರ ನಸುಕಿನ ಜಾವದಲ್ಲಿಯೇ ಶಾಕ್ ಕೊಟ್ಟು ಚಳಿ ಬಿಡಿಸಿದ ಎಸ್ಪಿ ರಾಹುಲ್‍ಕುಮಾರ್ ಶಹಪೂರ್ ವಾಡ್ ರವರ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಗರದಲ್ಲಿ ಇತ್ತೀಚೆಗೆ ಕುಖ್ಯಾತ ರೌಡಿಗಳನ್ನು ಎಡೆಮುಡಿ ಕಟ್ಟಲಾಗಿತ್ತು. ನಟೋರಿಯಸ್ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕೆಂಬ ಹುಮ್ಮಸ್ಸಿನಲ್ಲಿದ್ದ ಕುಖ್ಯಾತ ರೌಡಿಗಳನ್ನು ನಡ ಮುರಿದು ಜೈಲಿಗಟ್ಟಲಾಗಿತ್ತು. ಕೆಲವರು ಜಾಮೀನಿನ ಮೇಲೆ ಹೊರಗಿದ್ದರೆ ಇನ್ನು ಕೆಲವರು ಜೈಲಿನೊಳಗೆ ಇದ್ದಾರೆ.
ಕುಖ್ಯಾತ ರೌಡಿ ಪಟ್ಟ ಕಟ್ಟಿಕೊಳಲು ಹೊರಟವರು ಬೀದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡರೂ ಸಹ ಬುದ್ದಿಕಲಿಯದ ಪುಂಡರು ತನ್ನ ಕುಕೃತ್ಯಗಳಿಂದ ಪೊಲೀಸರ ಗುಂಡೇಟಿಗೆ ತನ್ನ ಕಾಲು ಕಳೆದುಕೊಂಡಿದ್ದರೂ ಸಹ ರೌಡಿಗಳ ಪಾಲಿಗೆ ನಾಯಕನಾಗಬೇಕೆಂಬ ಹಪಾಹಪಿಯಲ್ಲಿ ತೆರೆಮರೆಯೊಳಗೆ ತಮ್ಮ ಕೃತ್ಯಗಳನ್ನು ಪುಂಡಾಟಿಕೆಗಳನ್ನು ನಡೆಸುತ್ತಲೇ ಇದ್ದರು.
ಭೂಮಾಫಿಯಾ ಮತ್ತು ವಸೂಲಿಯಂತಹ ಕುಕೃತ್ಯಗಳನ್ನು ಹವ್ಯಾಹತವಾಗಿ ಸಾಗುತ್ತಲೇ ಇತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ತುಮಕೂರು ನಗರದ ಖಾಕಿ ಪಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಮುಂದಾಗಬಹುದಾದ ಘೋರ ಅಪರಾಧಗಳ ಮಾಹಿತಿಯನ್ನು ವಿವರವಾಗಿ ತಿಳಿಸಿ ಎಸ್ಪಿ ರಾಹುಲ್‍ಕುಮಾರ್ ಅವರ ಆದೇಶದ ಮೇರೆಗೆ ನ್ಯಾಯಾಲಯದ ಸರ್ಚ್ ವಾರೆಂಟ್ ಪಡೆದು ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ನಸುಕಿನಲ್ಲಿಯೇ ಚಳಿಮಳೆಯಲ್ಲಿ ದಾಳಿ ನಡೆಸಿದ್ದು, ರೌಡಿಗಳು ಮತ್ತು ಅವರ ಸಹಚರರ ಮನೆಗಳಲ್ಲಿ ತಪಾಸಣೆ ನಡೆಸಿ ಅವರ ಬಳಿ ಇರುವಂತಹ ಮಾರಕಾಸ್ತ್ರಗಳು ಮತ್ತು ಆಯುಧಗಳ ಪರಿಶೀಲನೆ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟುಕೊಂಡಿದ್ದಾರೆ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಿದರು.
ನಗರ ಉಪಾಧೀಕ್ಷರ ವ್ಯಾಪ್ತಿಯಲ್ಲಿ ಬರುವ 84 ರೌಡಿಶೀಟರ್‍ಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಇದೇ ಸಂದರ್ಭದಲ್ಲಿ 54 ಮಂದಿ ರೌಡಿಗಳನ್ನು ನಗರದ ಚಿಲುಮೆ ಸಮುದಾಯ ಭವನಕ್ಕೆ ಕರೆತಂದು ರೌಡಿ ಪೆರೇಡ್ ನಡೆಸಲಾಯಿತು.
ಆ ಸಂದರ್ಭದಲ್ಲಿ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ ರಾಹುಲ್‍ಕುಮಾರ್ ಅವರು ಕುಖ್ಯಾತ ರೌಡಿಶೀಟರ್ ರೋಹಿತ್‍ಗೆ ಎಚ್ಚರಿಕೆ ನೀಡಿದರು. ಜೊತೆಗೆ ಅಲ್ಲೇ ಇದ್ದಂತಹ ಅಜ್ಜು, ಬಾಲಾಜಿ, ಚಿದಾನಂದ್ ಎಂಬ ಕುಖ್ಯಾತ ರೌಡಿಗಳಿಗೆ ಇನ್ನು ಮುಂದೆ ನಿಮ್ಮ ಕೆಟ್ಟ ಚಾಳಿಯನ್ನು ಬಿಟ್ಟು ಈ ರೌಡಿಸಂನಿಂದ ಹೊರಗುಳಿದು ಉತ್ತಮ ಜೀವನ ನಡೆಸುವಂತೆ ತಾಕೀತು ಮಾಡಿದರು. 54 ರೌಡಿಗಳಿಗೂ ಸಹ ರೌಡಿಸಂ ಎನ್ನುವುದು ಇದೊಂದು ಹುದ್ದೆಯಲ್ಲ. ಇಂತಹ ಚಟುವಟಿಕೆಗಳು ನಿಮ್ಮ ಏಳ್ಗೆಯನ್ನು ಬಯಸುವುದಿಲ್ಲ. ನೀವು ಮಾಡುವಂತಹ ಅಕ್ರಮ ವ್ಯವಹಾರಗಳು ಮತ್ತು ಅನೌತಿಕ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ಜನರು ನಿಮ್ಮನ್ನು ನೋಡಿ ಭಯಪಡಬಹುದಷ್ಟೇ ನೀವು ಈ ಎಲ್ಲ ರೌಡಿಸಂ ಚಟುವಟಿಕೆಗಳಿಂದ ಹೊರಬಂದು ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ಜೀವನ ಸಾಗಿಸಿ ಸಮಾಜದಲ್ಲಿರುವವರ ನಡುವೆ ಪ್ರೀತಿಯಿಂದ ಬದುಕುವುದನ್ನು ಕಲಿಯಿರಿ. ನಾವು ಜನರನ್ನು ಪ್ರೀತಿಸಿದರೆ ಜನ ನಮ್ಮನ್ನು ಪ್ರೀತಿಸುತ್ತಾರೆ. ನೀವು ಸ್ವಂತ ದುಡಿಮೆಯಿಂದ ಬದುಕಿ. ಇನ್ನಾದರೂ ಕೆಟ್ಟ ಚಾಳಿಯಿಂದ ಹೊರಬಂದು ಜನ ಸಾಮಾನ್ಯರ ನಡುವೆ ನೀವೊಬ್ಬರಾಗಿ ಬದುಕಬೇಕು. ಹಾಗೆಯೇ ಬೇರೆಯವರನ್ನು ಬದುಕಲು ಬಿಡಿ. ನಿಮ್ಮಗಳ ಸ್ವಪ್ರತಿಷ್ಠೆ, ನಿಮ್ಮಗಳ ಹಗೆತನ ಮತ್ತು ದ್ವೇಷಗಳಿಂದ ಮನುಷ್ಯರನ್ನು ಪ್ರಾಣಿಗಳ ರೀತಿಯಲ್ಲಿ ಬಲಿಕೊಡದಿರಿ. ನೀವೂ ಬಲಿಯಾಗದಿರಿ.
ನಿಮಗೂ ಬದುಕಿದೆ ನಿಮ್ಮಗಳಿಗೂ ಕುಟುಂಬಗಳಿವೆ ಎನ್ನುವ ಬುದ್ದಿಮಾತನ್ನು ಹೇಳುವ ಜೊತೆಗೆ ಇದೇ ರೀತಿ ಮುಂದುವರೆದರೆ ಹೇಗೆ ನಿಮ್ಮನ್ನು ನಿಯಂತ್ರಣ ಮಾಡಬೇಕೆಂದು ನಮ್ಮ ಇಲಾಖೆಗೆ ಮತ್ತು ನಮಗೆ ಗೊತ್ತಿದೆ. ವಿನಾಕಾರಣ ನಾವಾಗಲಿ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಕಾನೂನು ಆಗಲಿ ಸುಮ್ಮನೆ ಬಿಡುವುದಿಲ್ಲ ಎನ್ನುವ ಖಡಕ್ ಎಚ್ಚರಿಕೆಯನ್ನು ಎಸ್ಪಿ ರಾಹುಲ್‍ಕುಮಾರ್ ಶಹಪೂರ್‍ವಾಡ್ ನೀಡಿದರು.
ಇದೇ ಸಂದರ್ಭದಲ್ಲಿ ದಾಳಿಯ ನೇತೃತ್ವ ವಹಿಸಿದಂತಹ ಎಎಸ್‍ಪಿ ಉದೇಶ್‍ಕುಮಾರ್ ಡಿವೈಎಸ್‍ಪಿ ಶ್ರೀನಿವಾಸ್, ಕ್ಯಾತ್ಸಂದ್ರ ಇನ್ಸ್‍ಪೆಕ್ಟರ್ ಚನ್ನೇಗೌಡ, ತಿಲಕ್‍ಪಾರ್ಕ್ ಠಾಣೆಯ ಇನ್ಸ್‍ಪೆಕ್ಟರ್ ನವೀನ್ ಬಿ., ನಗರ ವೃತ್ತನಿರೀಕ್ಷಕರಾದ ಮುನಿರಾಜು, ಗ್ರಾಮಾಂತರ ಇನ್ಸ್‍ಪೆಕ್ಟರ್ ರಾಮಕೃಷ್ಣ, ಮಹಿಳಾ ಠಾಣೆಯ ಇನ್ಸ್‍ಪೆಕ್ಟರ್ ಎಂ.ಬಿ ನವೀನ್‍ಕುಮಾರ್ ಸಬ್‍ಇನ್ಸ್‍ಪೆಕ್ಟರ್‍ಗಳಾದ ಮಂಜುನಾಥ್, ನವೀನ್, ವಿದ್ಯಾಶ್ರೀ, ಹರೀಶ್‍ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.