ತುಮಕೂರು:
ಎಲ್‍ಸಿಡಿಸಿ ಕುಷ್ಠರೋಗ ಪತ್ತೆಹಚ್ಚುವ ಅಂದೋಲನ ಆಗಸ್ಟ್ 16 ರಿಂದ ಸೆಪ್ಟೆಂಬರ್ 02ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರು ಕುಷ್ಠರೋಗ ಪತ್ತೆಹಚ್ಚುವ ಕಾರ್ಯಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ, ರೋಗ ನಿಯಂತ್ರಣದ ಬಗ್ಗೆ ಕ್ರಮಗಳನ್ನು ಆಂದೋಲನದಡಿ ಕೈಗೊಳ್ಳುವಂತೆ ಸೂಚಿಸಿದರು.
ಡಿಹೆಚ್‍ಓ ಡಾ.ಮಂಜುನಾಥ್ ಡಿ.ಎನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್‍ಸಿಡಿಸಿ ಕುಷ್ಠರೋಗ ಪತ್ತೆಹಚ್ಚುವ ಅಂದೋಲನ ಜಿಲ್ಲಾದ್ಯಂತ ನಡೆಯುವುದೆಂದು ತಿಳಿಸಿ, ಪಿಬಿ ಹಂತದಲ್ಲೇ ಗುರುತಿಸುವಂತೆ ಹಾಗೂ ಅಂಗವೈಕಲ್ಯ ಆಗದಂತೆ ಗುಣಮಟ್ಟ ಸಮೀಕ್ಷೆಯನ್ನು ಮಾಡುವಂತೆ ತಿಳಿಸಿದರು.
ಆಂದೋಲನದಲ್ಲಿ ಅಗತ್ಯವಿರುವೆಡೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸುವಂತೆ ನಿರ್ದೇಶಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಅವರಿಗೆ ಸೂಚಿಸಿದರು.
ಎಲ್ಲಾ ತಾಲ್ಲೂಕುಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ- ಮನೆ ಭೇಟಿ ನೀಡಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ಸಮೀಕ್ಷೆ ಮಾಡಬೇಕು ಹಾಗೂ ಕುಷ್ಠರೋಗ ಲಕ್ಷಣಗಳು ಕಂಡುಬಂದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಮಾಡಿಸುವುದು, ಹಾಗೂ ತಾಯಂದಿರ ಗುಂಪು ಸಭೆಗಳು, ಗ್ರಾಮಸಭೆ ಹಾಗೂ ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ನೀಡುವಂತೆ ಜಿಲ್ಲಾ ಆಶಾ ಸಂಯೋಜಕರಿಗೆ ಸೂಚಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ: ಶ್ರೀ ದೇವಿ ಚಂದ್ರಿಕಾ ಮಾತನಾಡಿ, ಅಂಗವೈಕಲ್ಯದ ಕಾರಣಗಳಲ್ಲಿ ಕುಷ್ಠರೋಗವು ಒಂದು ಪ್ರಮುಖ ಕಾರಣವಾಗಿದೆ. ಕುಷ್ಠರೋಗದ ಲಕ್ಷಣ, ರೋಗದ ಚಿನ್ಹೆ, ಪತ್ತೆಹಚ್ಚುವಿಕೆ ಬಗ್ಗೆ ವಿವರವಾಗಿ ಅಂದೋಲನದಲ್ಲಿ ತಿಳಿಸಬೇಕು ಎಂದರಲ್ಲದೇ ಪ್ರಸಕ್ತ ಸಾಲಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿಗಳಾದ ಡಾ.ಮೋಹನ್ ದಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಚಂದ್ರಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.