ತುಮಕೂರು:
ಕೇಂದ್ರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ನಿರ್ದೇಶಕರಾದ ವೇದಪ್ರಕಾಶ್ ಮಿಶ್ರಾ ಅವರಿಂದು, ಜಿಲ್ಲೆಯಲ್ಲಿ ‘ಜಲಶಕ್ತಿ ಅಭಿಯಾನ’ದಡಿ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾದ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ‘ಜಲಶಕ್ತಿ ಅಭಿಯಾನ’ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಡಿಯುವ ನೀರು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಜಲಮೂಲ ಪ್ರದೇಶಗಳ ಅತಿಕ್ರಮಣ ಕಾನೂನು ಬಾಹಿರ. ಅಂತರ್ಜಲ ಅಭಿವೃದ್ಧಿಯತ್ತ ನಾವುಗಳು ಇಂದು ಗಮನಹರಿಸಬೇಕಾಗಿದೆ. ಹಿಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸಂತೃಪ್ತ ವಲಯದಲ್ಲಿರುತ್ತಿತ್ತು ಆದರೆ, ಈಗ ಅಂತರ್ಜಲ 1000 ಅಡಿಗೂ ಕೆಳಮಟ್ಟ ತಲುಪಿದ್ದು, ಮಾನವನ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಫೀಡಿಂಗ್ ಕಾಲುವೆಗಳಲ್ಲೂ ಸಹ ಅತಿಕ್ರಮಣ ಆಗದ ಹಾಗೆ ನೋಡಿಕೊಳ್ಳಬೇಕಿದೆ, ಹೀಗಾದಲ್ಲಿ ಮಾತ್ರ ಜಲ ಮೂಲಗಳು ಸಂರಕ್ಷಿಸಲ್ಪಡುತ್ತವೆ. ಕೊಳವೆ ಬಾವಿಗಳು, ಅಚ್ಚುಕಟ್ಟು ಪ್ರದೇಶಗಳು ಮತ್ತು ಜಲ ಮೂಲಗಳ ಪುನರುಜ್ಜೀವನ ಯೋಜನೆಗಳು ನಿರಂತರವಾಗಿ ನಡೆಯುತ್ತಿರಬೇಕು. ಮಹಿಳೆಯರು ಸಹ ಜಲ ಜಾಗೃತಿ ಅಭಿಯಾನಗಳಲ್ಲಿ ಹೆಚ್ಚು ಭಾಗವಹಿಸುವಂತಾಗಬೇಕು ಮತ್ತು ಜಲ ಅಭಿಯಾನದಲ್ಲಿ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಣ್ಣ ನಿರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ 2 ಕೋಟಿ ರೂ.ಗಳ ವೆಚ್ಚದಲ್ಲಿ ಶೆಟ್ಟಿಹಳ್ಳಿ ಕಂದಕಟ್ಟೆ ಕೆರೆ, 1.50 ಕೋಟಿ ವೆಚ್ಚದಲ್ಲಿ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕವಣದಾಳ ಗ್ರಾಮದಲ್ಲಿ ಸುವರ್ಣ ಮುಖಿ ನದಿಗೆ ಚೆಕ್ ಡ್ಯಾಂ ನಿರ್ಮಾಣ, 1.50 ಕೋಟಿ ರೂ. ವೆಚ್ಚದಲ್ಲಿ ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ಪೂಜಾರಹಳ್ಳಿ ಗ್ರಾಮದ ಬಳಿ ಸುವರ್ಣ ಮುಖಿ ನದಿಗೆ ಚೆಕ್ ಡ್ಯಾಂ ನಿರ್ಮಾಣ, ಅಂತೆಯೇ ಕೊರಟಗೆರೆ ತಾಲ್ಲೂಕಿನ ಬರಾಕ ಗ್ರಾಮದ ಬಳಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಕುಣಿಗಲ್ ತಾಲ್ಲೂಕು ಯಡಿಯೂರು ಬಳಿ ಎಸ್.ಟಿ.ಪಿ. ಯೋಜನೆ ಕೈಗೆತ್ತಿಕೊಂಡಿದ್ದು, 5 ವಾಯು ಪೂರಕಗಳ ಅಳವಡಿಕೆ, 250 ಚ.ಮೀ. ತೇಲುವ ದ್ವೀಪಗಳ ಅಳವಡಿಕೆ, 10 ಸಾವಿರ ಮೀಟರ್ ಬಯೋ ಫ್ರೇಮ್, 4200 ಚ.ಮೀ. ಹೆಚ್.ಟಿ.ಪಿ. ಇ-ಲೈನರ್ ಅಳವಡಿಸಲಾಗಿದೆ ಎಂದು ವಿವರಿಸಲಾಯಿತು.
506 ಎಕರೆಯ ಪೈಕಿ, 490 ಎಕರೆಯಲ್ಲಿ ಹರಡಿರುವ ಅಮಾನಿಕೆರೆಯನ್ನು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಪುನರುಜ್ಜೀವನಗೊಳಿಸಲಾಗಿದೆ. ಈ ಮೂಲಕ ಅತ್ಯಮೂಲ್ಯ ನೀರಿನ ಸಂಗ್ರಹವನ್ನು ಅಮಾನಿಕೆರೆಯಲ್ಲಿ ವೃದ್ಧಿಸುವ ಮೂಲಕ ಜೀವವೈವಿಧ್ಯಗಳ ಸಂರಕ್ಷಣೆ ಮತ್ತು ತುಮಕೂರು ನಗರಕ್ಕೆ ಬೇಕಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಸಹ ಈ ಯೋಜನೆಯ ಮೂಲಕ ನೀಗಿಸಬಹುದಾಗಿದೆ ಎಂದು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತುಮಕೂರು ಮಹಾನಗರಪಾಲಿಕೆ ವತಿಯಿಂದ ಜಲಶಕ್ತಿ ಅಭಿಯಾನದಡಿ ಮಳೆ ನೀರು ಸಂಗ್ರಹಣೆ, ತ್ಯಾಜ್ಯ ನೀರಿನ ಮರುಬಳಕೆ, ಜಲಮೂಲಗಳ ಪುನರುಜ್ಜೀವನ ಮತ್ತು ಗಿಡ ನೆಡುವಿಕೆ ಮುಂತಾದ ಯೋಜನೆಗಳನ್ನು ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದೆ. ನಗರದ ಭೀಮಸಂದ್ರದ ಬಳಿ 25 ಒಐಆ ತ್ಯಾಜ್ಯವನ್ನು ಸಂಸ್ಕರಿಸಲು SಖಿP ಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸಂಸ್ಕರಿತ ನೀರನ್ನು ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಿಗೆ ಬಳಸಲಾಗುವುದು. ವಾರ್ಡ್ 30ರಲ್ಲಿ ಸುಮಾರು 7.8 ಎಕರೆ ಪ್ರದೇಶದಲ್ಲಿ ಹರಡಿರುವ ಗಾರೆ ನರಸಯ್ಯನ ಕಟ್ಟೆ ಕೆರೆಯನ್ನು ಪುನರುಜ್ಜೀವನಗೊಳಿಸಿ ಹೂಳು ತೆಗೆದು, ಬೇಲಿ ಹಾಕಿ, ಬೀದಿದೀಪ ಅಳವಡಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ರಾಗಿ ಮತ್ತು ಕಡಲೆಕಾಯಿ ಪ್ರಮುಖ ಕೃಷಿ ಬೆಳೆಗಳಾಗಿವೆ. ಪ್ರಧಾನ ಮಂತ್ರಿ ಸಿಂಚಯಿ ಯೋಜನೆ’ಯಡಿ 22 ನಾಲಾಬದುಗಳು, 38 ಚೆಕ್ ಡ್ಯಾಂಗಳು, 2 ಮಿನಿ ಟಾಂಕ್‍ಗಳು ಸೇರಿದಂತೆ ಒಟ್ಟು 62 ಕಾಮಗಾರಿಗಳನ್ನು ಜಿಲ್ಲೆಯಾದ್ಯಂತ ನೀರಿನ ಕೊರತೆ ಇರುವ ಕಡೆ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2021-22ನೇ ಸಾಲಿಗೆ 16 ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದ್ದು, 15 ಸಾವಿರ ಕ್ಯೂಬಿಕ್ ಮೀ. ನೀರು ಸಂಗ್ರಹಣಾ ಸಾಮಥ್ರ್ಯವನ್ನು ಈ ಮೂಲಕ ವೃದ್ಧಿಸಲಾಗಿದೆ ಎಂದು ಸಭೆಗೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಮೂಲಕ ರೈತರಿಗೆ ಕೃಷಿಹೊಂಡ, ಹನಿ ನೀರಾವರಿ, ಮಳೆ ನೀರು ಕೊಯ್ಲು ಯೋಜನೆಗಳನ್ನು ಜೆಲ್ಲೆಯಾದ್ಯಂತ ವ್ಯಾಪಕವಾಗಿ ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಾದ ಮಾವು, ಸೀಬೆ, ಗೋಡಂಬಿ, ತೆಂಗು, ಡ್ರ್ಯಾಗನ್ ಹಣ್ಣು, ಗುಲಾಬಿ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಾಮಾಜಿಕ ಅರಣ್ಯ ಯೋಜನೆಯಡಿ 17 ಕಾಮಗಾರಿಗಳಡಿ 150 ಹೆಕ್ಟೇರ್ ಪ್ರದೇಶದಲ್ಲಿ 74 ಸಾವಿರ ಸಸಿಗಳ ನೆಡುವಿಕೆ ಮತ್ತು 47.25 ಕಿ.ಮೀ. ಉದ್ದಕ್ಕೂ 14,172 ರಸ್ತೆಬದಿ ಗಿಡಗಳ ನೆಡುವಿಕೆ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು. ನರೇಗಾ ಯೋಜನೆಯಲ್ಲಿ ಜಲಶಕ್ತಿ ಅಭಿಯಾನದಡಿ 2021-22ನೇ ಸಾಲಿಗೆ ಜಿಲ್ಲಾದ್ಯಂತ 12082 ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಯೋಜನೆ, 748 ಸಾಂಪ್ರಾದಾಯಿಕ ಜಲಮೂಲಗಳ ಪುನರುಜ್ಜೀವನ, 9126 ಕೊಳವೆ ಬಾವಿಗಳ ಮರುಪೂರಣ ಮತ್ತು ಮರು ಬಳಕೆ, 7268 ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿ, 1 ಲಕ್ಷಕ್ಕೂ ಹೆಚ್ಚು ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಲ ಜೀವನ ಅಭಿಯಾನದ ವಿಜ್ಞಾನಿ ಓಂ ಪ್ರಾಕಾಶ್, ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.