ತುಮಕೂರು:


ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಜಲಸಂಗ್ರಹಾಗಾರ ನೀರಿಲ್ಲದೆ ಖಾಲಿಯಾಗಿ ಕುಡಿಯುವ ನೀರಿಗೆ ಅಭಾವ ಸೃಷ್ಠಿಯಾಗುತ್ತಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ ರಾತ್ರಿಯಿಂದಲೇ ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಲು ತೀರ್ಮಾನಿಸಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗುತ್ತಿರುವ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಶಾಸಕರಾದ ಜ್ಯೋತಿಗಣೇಶ್, ಡಾ. ರಾಜೇಶ್‍ಗೌಡ ಅವರು ನನ್ನನ್ನು ಭೇಟಿ ಮಾಡಿ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿದ್ದರು. ಜತೆಗೆ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದನ್ನೆಲ್ಲ ಗಮನಿಸಿ ರಾತ್ರಿಯಿಂದಲೇ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು. ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಜೂ. 17 ರಂದು ಹಮ್ಮಿಕೊಂಡಿರುವ ಬಸವಣ್ಣ ಹಾಗೂ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಆಹ್ವಾನಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ರಾತ್ರಿಯಿಂದಲೇ ಹೇಮಾವತಿ ನೀರು ಹರಿಸಲು ಕ್ರಮ ಕೈಗೊಂಡಿರುವುದಾಗಿ ಹೇಳುವ ಮೂಲಕ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ನೀಡಿದರು. ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡರು ನನಗೆ ಪತ್ರ ಬರೆದಿದ್ದರು. ಈ ಸಂಬಂಧ ನಾವು, ಮಾಧುಸ್ವಾಮಿ ಅವರು ಸಭೆ ನಡೆಸಿ ಚರ್ಚಿಸಿದ್ದೆವು. ನೀರು ಹರಿಸಲು ನಾವೇನೋ ಸಿದ್ದವಿದ್ದೆವು. ಆದರೆ ನಾಲೆಯಲ್ಲಿ ಕೆಲಸ ನಡೆಯುತ್ತಿದ್ದ ಪರಿಣಾಮ ವಿಳಂಬವಾಗಿತ್ತು ಎಂದರು.
ಬುಗುಡನಹಳ್ಳಿ ಕೆರೆ ಸೇರಿದಂತೆ ಎಲ್ಲ ಕೆರೆ ತುಂಬಿಸುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೀರು ಒದಗಿಸುತ್ತೇವೆ ಎಂದು ಅವರು ಭರವಸೆ ನೀಡಿದರು. ಅಬಕಾರಿ ಇಲಾಖೆಯ ಕಾರ್ಯವೈಖರಿ ನನಗೆ ತೃಪ್ತಿ ತಂದಿದ್ದು, ಇಲಾಖೆಯಿಂದ ಸರ್ಕಾರ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿದೆ. ಸರ್ಕಾರದ ನಿರೀಕ್ಷೆಯಂತೆ ಆದಾಯ ತರುವ ನಿಟ್ಟಿನಲ್ಲಿ ಗಮನ ಹರಿಸಿ ಕೆಲಸ ಮಾಡುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲಹಳ್ಳಿ ದೇವರಾಜು, ಮಾರೇಗೌಡ, ಗೋಪಾಲಕೃಷ್ಣ, ಲಕ್ಷ್ಮಿನಾರಾಯಣ, ಹಿರೇಹಳ್ಳಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

(Visited 3 times, 1 visits today)