ತುಮಕೂರು:
ಭವಿಷ್ಯ ನಿಧಿ, ಸುಪ್ರೀಂಕೋರ್ಟ್ ಆದೇಶ ಪಾಲನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಗರದ ಟೌನ್‍ಹಾಲ್‍ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತರು, ಗಾಜಿನ ಮನೆಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಮಲಮ್ಮ ಮಾತನಾಡಿ ಶಾಲಾ ಪೂರ್ವ ಶಿಕ್ಷಣದೊಂದಿಗೆ ಮಕ್ಕಳು, ಗರ್ಭೀಣಿಯರು, ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಪ್ರಮುಖ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಅತ್ಯಲ್ಪ ಗೌರವ ಧನಕ್ಕೆ ಕೆಲಸ ಮಾಡುತ್ತಿದ್ದು, ಸುಪ್ರೀಂಕೋರ್ಟ್ ಆದೇಶದ ಅನ್ವಯ ಭವಿಷ್ಯ ನಿಧಿ ಸೇರಿದಂತೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಂಗನವಾಡಿ ನೌಕರರು ನಿವೃತ್ತರಾದರೆ ಇಡಗಂಟು ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈಗಿನ ಸರ್ಕಾರ ಇಡಗಂಟು ನೀಡುವುದಕ್ಕೆ ಅನುದಾನದ ಕೊರತೆ ಎನ್ನುತ್ತಿದೆ. ಸಮಾನಾಂತರ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರು ಸಹ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡಬೇಕು, ಎನ್‍ಪಿಎಸ್ ಬದಲಿಗೆ ನಿಗದಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಅಂಗನವಾಡಿ ನೌಕರರನ್ನು ಅರೆಕಾಲಿಕ ಉದ್ಯೋಗಿಗಳು ಎನ್ನುವ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ಅಲ್ಲಗಳೆದಿದ್ದು, ಕನಿಷ್ಠ 26 ಸಾವಿರ ವೇತನ ನೀಡಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಮಾತನಾಡಿ, ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತದೆಯೋ ಹೊರತು, ಅದಕ್ಕೆ ಅಗತ್ಯ ಅನುದಾನವನ್ನು ಕಲ್ಪಿಸುವುದಿಲ್ಲ, ಅಂಗನವಾಡಿ ನೌಕರರಿಗೆ ಮೊಬೈಲ್ ನೀಡಿರುವ ಸರ್ಕಾರ, ಕರೆನ್ಸಿ ಹಾಕಲು ಹಣವಿಲ್ಲ ಎನ್ನುತ್ತದೆ. ಅಪೌಷ್ಠಿಕತೆ ನಿರ್ಮೂಲನೆಗೆ ಮೊಟ್ಟೆ ನೀಡುವುದಾಗಿ ಘೋಷಿಸುವ ಸರ್ಕಾರ ಅದಕ್ಕೆ ಅನುದಾನ ನೀಡುವುದಿಲ್ಲ, ಸರ್ಕಾರದ ಯೋಜನೆಗಳಿಂದ ಅಂಗನವಾಡಿ ನೌಕರರು ಸಾಲಗಾರರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.