ತುಮಕೂರು:
ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಮೂರು ದಿನಗಳ ಸತತ ಕಾರ್ಯಾಚರಣೆಯ ಫಲದಿಂದಾಗಿ ಸೋಮವಾರ ಭೀಮಸಂದ್ರದ ಬಳಿ ಮಣ್ಣಿನಲ್ಲಿ ಪತ್ತೆಯಾಗಿದೆ.
ಕಳೆದ ಮೂರು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ ಅಮ್ಜದ್ ಖಾನ್ ಅವರ ಮೃತದೇಹ ಶೋಧನಾ ಕಾರ್ಯವನ್ನು ಎನ್‍ಡಿಆರ್‍ಎಫ್ ತಂಡ, ಮಹಾನಗರ ಪಾಲಿಕೆ ಸಿಬ್ಬಂದಿ, ಅಗ್ನಿಶಾಮಕ ದಳದವರು ನಡೆಸಿದ್ದು, ಸೋಮವಾರ ಮಧ್ಯಾಹ್ನ 2.30 ರ ವೇಳೆಗೆ ಮಣ್ಣಿನಲ್ಲಿ ಹೂತಿಕೊಂಡಿದ್ದ ಶವವನ್ನು ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಹೊರ ತೆಗೆಯಲಾಯಿತು. ಆಟೋ ಚಾಲಕ ಶವ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಜ್ಯೋತಿಗಣೇಶ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಎನ್‍ಡಿಆರ್‍ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿಯ ಸತತ ಕಾರ್ಯಾಚರಣೆಯಿಂದಾಗಿ ಪತ್ತೆಯಾಗಿದೆ. ಆಟೋ ಚಾಲಕ ಕೊಚ್ಚಿ ಹೋಗಿದ್ದ ಸ್ಥಳದಿಂದ ಸುಮಾರು 1.05 ಕಿ.ಮೀ. ದೂರದಲ್ಲಿ ಶವ ಪತ್ತೆಯಾಗಿದೆ ಎಂದರು. ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ, ಪಾಲಿಕೆ ವತಿಯಿಂದ 50 ಸಾವಿರ ರೂ. ನೀಡಲಾಗುವುದು. ಜತೆಗೆ ಆ ಕುಟುಂಬಕ್ಕೆ ಮನೆ ಸೇರಿದಂತೆ ಇತರೆ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಕೆಲಸವನ್ನು ಸಹ ಮಾಡಲಾಗುವುದು ಎಂದು ಹೇಳಿದರು. ಜತೆಗೆ ವೈಯುಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳೆಲ್ಲ ಸೇರಿ ಕುಟುಂಬದವರಿಗೆ ಹೆಚ್ಚಿನ ಸಹಾಯ ಮಾಡಲಾಗುವುದು ಎಂದರು. ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ಮೃತ ಆಟೋ ಚಾಲಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು ಹಾಗೂ ಈ ಕುಟುಂಬದ ಯಾರಾದರೂ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾಡಳಿತ, ಎನ್‍ಡಿಆರ್‍ಎಫ್ ತಂಡ ಹಾಗೂ ಮಹಾನಗರ ಪಾಲಿಕೆಯ ಸತತ ಶ್ರಮದ ಕಾರ್ಯದಿಂದಾಗಿ ಮೃತದೇಹ ಪತ್ತೆಯಾಗಿದೆ ಎಂದರು. ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಮೃತ ಆಟೋ ಚಾಲಕ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಸರ್ಕಾರ ಈ ಕುಟುಂಬದವರಿಗೆ ಹೆಚ್ಚಿನ ಪರಿಹಾರ ಕಲ್ಪಿಸುವ ಜತೆಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದರು. ಕಳೆದ 3 ದಿನಗಳಿಂದ ನಡೆದ ಕಾರ್ಯಾಚರಣೆಯ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಮಹಾನಗರ ಪಾಲಿಕೆ ಸದಸ್ಯ ಹೆಚ್.ಡಿ. ಮಂಜುನಾಥ್ ಮಾತನಾಡಿ, ಮೃತ ಆಟೋ ಚಾಲಕ ನನ್ನ ವ್ಯಾಪ್ತಿಯ ವಾರ್ಡ್‍ನವರಾಗಿದ್ದು, ಸ್ವಂತ ಸೂರು ಸಹ ಹೊಂದಿಲ್ಲ. ಬಾಡಿಗೆ ಆಟೋ ಪಡೆದು ಜೀವನ ಸಾಗಿಸುತ್ತಿದ್ದರು. ದುರಾದೃಷ್ಟವಶಾತ್ ಇಂದು ಆ ಕುಟುಂಬಕ್ಕೆ ಆಧಾರ ಇಲ್ಲದಂತಾಗಿದೆ.
ಇದನ್ನು ಮನಗಂಡು ಸರ್ಕಾರ ಈ ಕುಟುಂಬದವರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.