ತುಮಕೂರು:
ದೇಶಾದ್ಯಂತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಮತ್ತು ವರ್ಣರಂಜಿತವಾಗಿ ಆಚರಿಸಲಾಗುತ್ತಿದ್ದು, ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಎಂಬ ಘೋಷ ವಾಕ್ಯದೊಂದಿಗೆ 2022ರ ಆಗಸ್ಟ್ 11ರಿಂದ 17ರವರೆಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ, ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವ ನಿಟ್ಟಿನಲ್ಲಿ ‘ಹರ್ ಘರ್ ತಿರಂಗಾ’ ಎಂಬ ಕಾರ್ಯಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ‘ಹರ್ ಘರ್ ತಿರಂಗಾ’ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸಲು, ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಹಾಗೂ ಮಕ್ಕಳಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸುವುದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಪ್ರತೀ ಗ್ರಾಮ ಪಂಚಾಯ್ತಿಗಳಲ್ಲಿ 250 ಭಾವುಟಗಳನ್ನು ಖರೀದಿಸಿ ಸಂಬಂಧಿಸಿದ ಎಲ್ಲಾ ಸರ್ಕಾರಿ ಕಚೇರಿ, ಕ್ವಾಟ್ರಸ್, ಅಂಗನವಾಡಿ, ಶಾಲಾ-ಕಾಲೇಜು, ನ್ಯಾಯ ಬೆಲೆ ಅಂಗಡಿಗಳಿಗೆ ನೀಡುವ ಮೂಲಕ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕರೆ ನೀಡಬೇಕು ಎಂದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಹಾಸ್ಟೆಲ್‍ಗಳು, ಗ್ರಾಮ ಪಂಚಾಯತಿಗಳು ಹಾಗೂ ಪೊಲೀಸ್ ಠಾಣೆಗಳು ಮತ್ತು ಪ್ರತಿ ಮನೆ-ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಇಲಾಖಾ ಮುಖ್ಯಸ್ಥರುಗಳು, ಸಿಇಓ, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿಡಿಪಿಐ, ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಪುರಸಭೆ/ಪಟ್ಟಣ ಪಂಚಾಯತಿ/ನಗರಸಭೆ/ಮಹಾನಗರಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದು ಕಡ್ಡಾಯ ಎಂದರು.
ಕೋವಿಡ್-19ಗೆ ಸಂಬಂಧಿಸದಂತೆ ಮಾಸ್ಕ್‍ಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಷಹಪೂರ್‍ವಾಡ್, ಉಪ ವಿಭಾಗಾಧಿಕಾರಿ ವಿ.ಅಜಯ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.