ತುಮಕೂರು:
ಗುಬ್ಬಿ ತಾಲೂಕು ಕಚೇರಿಯ ಕಂದಾಯ ಇಲಾಖೆಯ ಅಧಿಕಾರಿಗಳು, ಭೂಗಳ್ಳರ ಜೊತೆ ಸೇರಿ ನಡೆಸಿರುವ ಅವ್ಯವಹಾರವನ್ನು ಪತ್ತೆ ಹಚ್ಚಿ ತನಿಖೆ ನಡೆಸುವ ನಿಟ್ಟಿನಲ್ಲಿ ಸರಕಾರ ಪ್ರಕರಣವನ್ನು ಮುಂದಿನ 15 ದಿನಗಳಲ್ಲಿ ಸಿಒಡಿ ತನಿಖೆಗೆ ವಹಿಸದಿದ್ದರೆ ಆಗಸ್ಟ್ 08 ರಂದು ಗುಬ್ಬಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡಸಲಾಗುವುದು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ನಗರದ ವಿಜ್ಞಾನಕೇಂದ್ರದಲ್ಲಿ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗುಬ್ಬಿ ತಾಲೂಕಿನ 137 ಜನರಿಗೆ 450 ಎಕರೆ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. 50-53ಯಲ್ಲಿ ಅರ್ಜಿ ಸಲ್ಲಿಸದೆ ಇದ್ದರೂ ಸಹ ಹಳೆಯ ಪಹಣಿಗಳನ್ನು ತಿದ್ದಿ, ಉಳ್ಳವರಿಗೆ ಅದರಲ್ಲಿಯೂ ಕಂದಾಯ ಇಲಾಖೆಯ ನೌಕರರ ಅಪ್ಪ, ಅಮ್ಮ, ತಂಗಿ, ಅಕ್ಕ, ಭಾವ, ತಮ್ಮ, ಅಣ್ಣನ ಸೇರಿದಂತೆ ಸಂಬಂಧಿಕರ ಹೆಸರಿಗೆ ಕೋಟ್ಯಾಂತರ ರೂ ಬೆಲೆ ಬಾಳುವ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ. ಇದರ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇರುವುದರಿಂದ ಕೂಡಲೇ ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸಬೇಕೆಂಬುದು ರೈತ ಸಂಘ ಸೇರಿದಂತೆ ರೈತರ ಮತ್ತು ನಾಗರಿಕರ ಒತ್ತಾಯವಾಗಿದೆ.ಹಾಗಾಗಿ ಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಆಗಸ್ಟ್ 08 ರಂದು ರೈತರು, ಪ್ರಗತಿಪರರು, ಬಡವರು, ಕೂಲಿ ಕಾರ್ಮಿಕರು,ನಾಗರಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎ.ಗೋವಿಂದರಾಜು ತಿಳಿಸಿದರು.
ಶಿರಾ ತಾಲೂಕು ಸೀಬಿ ನರಸಿಂಹಸ್ವಾಮಿ ದೇವಾಲಯದ ಸುತ್ತಮುತ್ತಲು ಇರುವ ಭೂಮಿಯನ್ನು ಕೆಲ ಪ್ರಭಾವಿಗಳು ಸೇರಿ ಕಬಳಿಸಲು ಮುಂದಾದಾಗ,ಅಲ್ಲಿನ ತಹಶೀಲ್ದಾರರು ಮತ್ತು ಅರಣ್ಯ ಇಲಾಖೆಯ ಮುಖ್ಯಸ್ಥರು ಸೇರಿ ಸುಮಾರು 750 ಎಕರೆ ಭೂಮಿಯನ್ನು ಉಳಿಸಿದ್ದಾರೆ. ಆದರೆ ಇಂತಹ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಸರಕಾರ ಭೂಗಳ್ಳರ ಒತ್ತಡಕ್ಕೆ ಮಣಿದು ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ,ಅಧಿಕಾರಿಗಳ ಪರವಾಗಿ ರೈತ ಸಂಘ ನಿಂತು ವರ್ಗಾವಣೆ ರದ್ದಾಗುವವರೆಗೂ ಹೋರಾಟ ನಡೆಸಲಿದೆ ಎಂದರು.
ಕೇಂದ್ರ ಸರಕಾರ ಕೃಷಿ ಬೆಲೆಗಳಿಗೆ ಬೆಂಬಲಬೆಲೆ ನೀಡುವ ಸಂಬಂದ ರಚಿಸಿರುವ ಸಮಿತಿಯಲ್ಲಿ ಕಿಸಾನ್ ಮೋರ್ಚಾದ ಯಾರು ಇಲ್ಲ.ಹಾಗಾಗಿ ಈ ಸಮಿತಿಯಿಂದ ರೈತರಿಗೆ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ.ಕೂಡಲೇ ಸರಕಾರ ಸದರಿ ಸಮಿತಿಯನ್ನು ವಿಸರ್ಜಿಸಿ, ಕಿಸಾನ್ ಮೋರ್ಚಾ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಬೇಕೆಂಬುದು ನಮ್ಮ ಒತ್ತಾಯಿಸಿ, ಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಆಗಸ್ಟ್ 8 ರಂದು ಬಿಜೆಪಿ ಅಧಿಕಾರ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಯಲಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಕೇಂದ್ರದ ವಿದ್ಯುತ್ ಸಚಿವರು ವಿದ್ಯುತ್ ಖಾಸಗೀಕರಣ ಬಿಲ್ ತರಲು ಮುಂದಾಗಿದೆ.ಇದು ಖಂಡನೀಯ. ವಿದ್ಯುತ್ ಖಾಸಗಿ ಬಿಲ್ ಜಾರಿಯಾದರೆ ರೈತರ ಐಪಿ ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್ ಹಾಕಲಿದ್ದಾರೆ.ಇದರಿಂದ ರೈತರ ಬದುಕು ಬೀದಿಗೆ ಬರಲಿದೆ.ಹಾಗಾಗಿ ಎಂದಿಗೂ ಸರಕಾರ ವಿದ್ಯುತ್ ಇಲಾಖೆಯ ಖಾಸಗೀಕರಣಕ್ಕೆ ರೈತರು ಒಪ್ಪುವುದಿಲ್ಲ. ಇದರ ವಿರುದ್ದ ಉಗ್ರ ಹೋರಾಟ ರೂಪಿಸಲಿದ್ದಾರೆ.ಅಲ್ಲದೆ ರಾಜ್ಯ ಕಂದಾಯ ಸಚಿವರು ಫಾರಂ 57 ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರು ಮಾಡುವ ಬದಲು, ಲೀಸ್ ನೀಡುವುದಾಗಿ ಹೇಳಿದ್ದಾರೆ. ಇದು ತರವಲ್ಲ. ಉಳ್ಳವರಿಗೆ ಭೂಮಿ ಕಬಳಿಸುವ ಉದ್ದೇಶ ಇದರ ಹಿಂದಿದೆ. ಕೂಡಲೇ ತನ್ನ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಚನೈ-ಬಾಂಬೆ ಕೈಗಾರಿಕಾ ಕಾರಿಡಾರ್‍ಗೆ ಜಿಲ್ಲೆಯ 123 ಹಳ್ಳಿಗಳ 80 ಸಾವಿರ ಜನರನ್ನು ಎತ್ತಂಗಡಿ ಮಾಡಲು ಹೊರಟಿದೆ. ಸರಕಾರ ಕಾರಿಡಾರ್‍ಗೆ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿದೆ.ಇದರ ವಿರುದ್ದ ಆ ಭಾಗದ ರೈತರು ಆಗಸ್ಟ್ 01 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು,ರೈತ ಸಂಘ ಇದರಲ್ಲಿ ಭಾಗಿಯಾಗಿ ಅವರ ಹೋರಾಟಕ್ಕೆ ಸಾಥ್ ನೀಡಲಿದೆ ಎಂದ ಗೋವಿಂದರಾಜು,ಇತ್ತೀಚಗೆ ಮಧುಗಿರಿ ತಾಲೂಕಿನ ಬೋರಲಗುಂಟೆ ಗ್ರಾಮದ ರೈತರು ಜಿ.ಕೆ.ವಿಕೆಯವರ ಅಭಿವೃದ್ದಿ ಪಡಿಸಿದ ಯುಎಎಸ್ ಸುಧಾರಿತ ರಾಗಿ ತಳಿಯನ್ನು ಬಿತ್ತನೆ ಮಾಡಿದ್ದ ಒಂದು ಕ್ವಿಂಟಾಲ್‍ಗೂ ಹೆಚ್ಚು ರಾಗಿ ಮೊಳಕೆ ಬಂದಿಲ್ಲ.ಹಾಗಾಗಿ ಸದರಿ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಸರಕಾರ ನೀಡಬೇಕು ಎಂದು ಎ.ಗೋವಿಂದರಾಜು ಒತ್ತಾಯಿಸಿದರು.
ಗುಬ್ಬಿ ತಾಲೂಕು ಹಾಗಲವಾಡಿ ಮತ್ತು ಚೇಳೂರು ಹಟ್ಟಿ ಗ್ರಾಮದ ರೈತರ ಮೇಲೆ ದಬ್ಬಾಳಿಕೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರದ ಬೇಬಿ ಬೆಟ್ಟದಲ್ಲಿ ಪ್ರಾಯೋಗಿಕವಾಗಿ ನಡೆಸಲು ಉದ್ದೇಶಿಸಿರುವ ಸ್ಪೋಟವನ್ನುಕೈಬಿಡಬೇಕೆಂಬುದು ರೈತ ಸಂಘದ ಧೋರಣೆಯಾಗಿದೆ. ಈ ನಿಟ್ಟಿನಲ್ಲಿ ರೈತ ಸಂಘ ನಿರಂತರವಾಗಿ ಹೋರಾಟ ನಡೆಸುತಿದ್ದು,ಕೂಡಲೇ ಸರಕಾರ ತಾನು ಕಳುಹಿಸಿರುವ ತಂಡವನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ತಾಲೂಕು ಅಧ್ಯಕ್ಷರುಗಳಾದ ಬೋರೇಗೌಡ, ಶಬ್ಬೀರ್, ಪೂಜಾರಪ್ಪ, ರಂಗಧಾಮಯ್ಯ, ಸಿ.ಟಿ.ಕುಮಾರ್, ಹುಚ್ಚೇಗೌಡ, ಚನ್ನಬಸವಣ್ಣ, ಮುಕುಂದಪ್ಪ, ಕಾಳೇಗೌಡ, ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್ ಮತ್ತಿತರರು ಉಪಸ್ಥಿತರಿದ್ದರು.