ತುಮಕೂರು:
ದಿನಾಂಕ 18-7-2022ರಂದು ಕರ್ನಾಟಕ ಸರ್ಕಾರವು ಜನನ ಮತ್ತು ಮರಣ ಸಮರ್ಥನಾ ಪತ್ರಗಳನ್ನು ಪಡೆಯಲು ಕಾಯ್ದೆಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದ್ದು ಸದರಿ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಲಯದ ಕಾರ್ಯವ್ಯಾಪ್ತಿಯಿಂದ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳಿಗೆ ಅಧಿಕಾರವನ್ನು ನೀಡಿರುವುದರಿಂದ ಸದರಿ ಕಾಯ್ದೆಯು ಸಾರ್ವಜನಿಕರಿಗೆ ಮತ್ತು ವಕೀಲ ಸಮುದಾಯಕ್ಕೆ ಮಾರಕ ಕಾಯ್ದೆಯಾಗಿರುತ್ತದೆ.
ಈಗಾಗಲೇ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕಂದಾಯ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇದ್ದು,ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಬಹಳ ಕಾಲ ವಿಳಂಬವಾಗಿರುತ್ತದೆ.
ಸದರಿ ಕಾಯ್ದೆಯು ಜಾರಿಗೊಂಡರೆ ಜನನ ಮತ್ತು ಮರಣ ಸಮರ್ಥನಾ ಪ್ರಮಾಣಪತ್ರ ಪಡೆಯಲು ಸಾಕಷ್ಟು ವಿಳಂಬವಾಗುವುದರ ಜೊತೆಗೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ.
ಜೊತೆಗೆ ಮಧ್ಯವರ್ತಿಗಳ ಹಾವಳಿಗೆ ಸಾರ್ವಜನಿಕರು ತುತ್ತಾಗುವ ಸಾಧ್ಯತೆ ಹೆಚ್ಚುವುದರ ಜೊತೆಗೆ ಈ ಕಾಯ್ದೆಯು ದುರುಪಯೋಗವಾಗುತ್ತದೆ.
ಆದ್ದರಿಂದ ಈ ಕಾಯ್ದೆಗೆ ಸರ್ಕಾರವು ಹಸ್ತಕ್ಷೇಪ ಮಾಡದೇ ಜನನ ಮತ್ತು ಮರಣ ಸಮರ್ಥನಾ ಪ್ರಮಾಣಪತ್ರ ಪಡೆಯಲು ಕಾಯ್ದೆಯ ಕಾರ್ಯವ್ಯಾಪ್ತಿಯನ್ನು ಹಿಂದಿನಂತೆಯೇ ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಉಳಿಸಿಕೊಂಡು ಈ ಕಾಯ್ದೆಯ ತಿದ್ದುಪಡಿ ಮತ್ತು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕೆಂದು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ದೊಡ್ಡಮನೆ ಗೋಪಾಲಗೌಡರ ನೇತೃತ್ವದಲ್ಲಿ ಇಂದು ನೂರಾರು ವಕೀಲರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಸಿ.ವೆಂಕಟೇಶ್, ಡಿ.ಸಿ.ಹಿಮಾನಂದ್,ಕೆ.ಎಲ್.ಭಾರತಿ, ಸಿ.ಸುರೇಶ್ ಕುಮಾರ್, ಬಿ.ಎಸ್.ರಾಮಕೃಷ್ಣ, ಕೆ.ಆರ್.ಮಮತ, ಎಲ್.ರಾಮಾಂಜನಯ್ಯ, ಸಿ.ಜಿ.ಲಕ್ಷ್ಮೀಶ,ಎಲ್. ಷಣ್ಮುಖ, ಮಂಜುನಾಥ, ಶಂಕರ್, ಶಫಿ, ವಿಜಯ್ ಕುಮಾರ್, ಹಿರಿಯ ವಕೀಲರುಗಳಾದ ಬಿ.ಆರ್.ರಾಮಕೃಷ್ಣಯ್ಯ, ಎಸ್.ಎಂ.ಕೃಷ್ಣಮೂರ್ತಿ, ನರಸಿಂಹಯ್ಯ, ಸೋಮಶೇಖರ್, ಮುಂತಾದವರು ಹಾಜರಿದ್ದರು.