ತುಮಕೂರು:
ನಗರದ ಜಿಲ್ಲಾಸ್ಪತ್ರೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಭೇಟಿ ನೀಡಿ ಕರಡಿ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.
ಹೂ ಬಿಡಿಸುವ ವೇಳೆ ಕರಡಿ ದಾಳಿಗೆ ಒಳಗಾಗಿ ತೀವ್ರ ಸ್ವರೂಪದ ಗಾಯಗಳಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಸಮೀಪದ ಸೂರನಹಳ್ಳಿ ಗ್ರಾಮದ ಕರೀಂಸಾಬ್ ಮತ್ತು ರೇಣುಕಮ್ಮ ಅವರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಗಾಯಾಳುಗಳನ್ನು ಮಾತನಾಡಿಸಿ ಸಾಂತ್ವನ ಹೇಳಿದರು.
ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಬಳಿ ಮಾತನಾಡಿದ ಡಾ. ಜಿ. ಪರಮೇಶ್ವರ್ ಅವರು ಕರಡಿ ದಾಳಿ ನಡೆದ ಬಗ್ಗೆ ಮಾಹಿತಿ ಪಡೆದುಕೊಂಡು, ಧೈರ್ಯದಿಂದ ಇರುವಂತೆ ಹೇಳಿ, ಸರ್ಕಾರದಿಂದ ನೀಡುವ 20 ಸಾವಿರ ರೂ.ಗಳನ್ನು ಸಂತ್ರಸ್ತರ ಬ್ಯಾಂಕ್ ಖಾತೆ ಆರ್‌ಟಿಜಿಎಸ್ ಮಾಡುವ ಆದೇಶ ಪತ್ರವನ್ನು ನೀಡಿದರು.
ಅಲ್ಲದೆ ತಾವು ಸಹ ವೈಯುಕ್ತಿಕವಾಗಿ ಗಾಯಾಳುಗಳಿಗೆ 20 ಸಾವಿರ ರೂ. ನಗದು ನೀಡಿದರು. ಗಾಯಾಳುಗಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಅರಣ್ಯ ಇಲಾಖೆಯಿಂದಲೇ ಭರಿಸುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಕರಡಿ ದಾಳಿಯಿಂದ ತೀವ್ರ ಸ್ವರೂಪದ ಗಾಯಗಳಾಗಿರುವ ಇವರುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆದಷ್ಟು ಶೀಘ್ರ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರಿಗೆ ಉಪಮುಖ್ಯಮಂತ್ರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಡಿಹೆಚ್ಓ ಡಾ. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.