ತುಮಕೂರು:


ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮೃತಪಟ್ಟಿದ್ದ ಈರಣ್ಣನವರ ಪತ್ನಿ ಭಾಗ್ಯರತ್ನ ಅವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ಶಾಸಕ ಜ್ಯೋತಿಗಣೇಶ್ ವಿತರಿಸಿದರು.
ನಗರದ ಉಪ್ಪಾರಹಳ್ಳಿಯ ಶಿವಮೂಕಾಂಬಿಕ ನಗರದಲ್ಲಿ ವಾಸವಾಗಿದ್ದ ಈರಣ್ಣನವರು ಕಳೆದ ಮೂರು ದಿನಗಳ ಹಿಂದೆ ಮಳೆ ನೀರು ಮನೆ ನುಗ್ಗಿ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದರು. ಇವರ ಕುಟುಂಬಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ವಿತರಿಸುವ 5 ಲಕ್ಷ ರೂ. ಪರಿಹಾರ ಚೆಕ್‍ನ್ನು ಕುಟುಂಬದವರಿಗೆ ವಿತರಿಸಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಮಳೆಯಲ್ಲಿ ಉಪ್ಪಾರಹಳ್ಳಿ ಶಿವಮೂಕಾಬಿಂಕ ನಗರದಲ್ಲಿನ ಈರಣ್ಣನವರ ಮನೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಉಂಟಾದ ವಿದ್ಯುತ್ ಅವಘಡದಿಂದ ಈರಣ್ಣನವರು ಸಾವನ್ನಪ್ಪಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ. ಅತಿಯಾದ ಮಳೆಯಿಂದಾಗಿ ಅವಾಂತರ, ಅವಘಡಗಳು ಸಂಭವಿಸುತ್ತಲೇ ಇವೆ. ಅವಘಡಗಳು ಆಗದಂತೆ ಅಧಿಕಾರಿಗಳು ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ ಎಂದರು.
ಮೃತ ಈರಣ್ಣನವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ. ಅಲ್ಲದೆ ಪಾಲಿಕೆ ವತಿಯಿಂದಲೂ 1 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದರು.
ಕಳೆದ 30 ವರ್ಷದಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಳೆ ಒಂದೇ ರಾತ್ರಿಯಲ್ಲಿ ಸುರಿದಿರುವುದು ಈ ಬಾರಿ ಮಾತ್ರ. ಈ ಪ್ರಮಾಣದಲ್ಲಿ ಮಳೆಯಾದರೆ ಯಾರು ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಈ ಕುಟುಂಬದವರಿಗೆ ಬೆಸ್ಕಾಂ ವತಿಯಿಂದಲೂ ಸಹಾಯ ಮಾಡಲಾಗುವುದು ಎಂದು ಅವರು ಹೇಳಿದರು.
ಮೃತ ಈರಣ್ಣನವರ ಪುತ್ರ ವಿನಯಕುಮಾರ್ ಹಾಗೂ ಪುತ್ರಿ ಪಂಕಜಾ ಮಾತನಾಡಿ, ಅನಿರೀಕ್ಷಿತ ಘಟನೆಯಿಂದ ನಮ್ಮ ತಂದೆಯನ್ನು ಕಳೆದುಕೊಂಡು ಶಾಕ್‍ನಲ್ಲಿದ್ದೇವೆ. ನಮ್ಮ ತಂದೆಯನ್ನು ಯಾರೂ ವಾಪಸ್ ತಂದು ಕೊಡಲು ಸಾಧ್ಯವಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಶಾಸಕರು, ತಹಶೀಲ್ದಾರರು, ಪಾಲಿಕೆ ಆಯುಕ್ತರು, ಪಾಲಿಕೆ ಸದಸ್ಯರು ನಮ್ಮೊಂದಿಗಿದ್ದು ಧೈರ್ಯ ತುಂಬಿದ್ದಾರೆ. ಅವರುಗಳಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್‍ಕುಮಾರ್, ಕಂದಾಯ ನಿರೀಕ್ಷಕ ಅಜಯ್, ಗ್ರಾಮ ಲೆಕ್ಕಿಗ ರವಿ, ಪಾಲಿಕೆ ಸದಸ್ಯ ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)