ಕೊರಟಗೆರೆ:
ಸತತವಾಗಿ ಒಂದು ವಾರದಿಂದ ಬೊಬ್ಬಿರಿದು ಅಬ್ಬರಿಸುತ್ತಿರುವ ಮಳೆಯಿಂದಾಗಿ ಕೊರಟಗೆರೆ ಪಟ್ಟಣ ನೀರಿನಿಂದ ಆವೃತವಾಗಿ ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಇನ್ನೂ ನೀರು ಹೆಚ್ಚಾಗಿ ಹೊಲ, ಗದ್ದೆ, ಗ್ರಾಮದ ಅನೇಕ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.
ಹೆಚ್ಚಿದ ಮಳೆಯಿಂದಾಗಿ ಜನರ ದೈನಂದಿನ ವಹಿವಾಟಿಗೆ ಸಮಸ್ಯೆ ಆಗಿದ್ದಲ್ಲದೇ ಜಾನುವಾರುಗಳು ಕೂಡಾ ಮಳೆಯಿಂದ ತತ್ತರಿಸಿವೆ. ಪ್ರಸ್ತುತ ಘಟ್ಟದಲ್ಲಿ ಕೊರಟಗೆರೆ ತಾಲ್ಲೂಕು ಮಲೆನಾಡಿನ ಕಳೆಯನ್ನು ಹೊಂದಿದೆ.
ತಾಲ್ಲೂಕಿನ ಪ್ರತಿಯೊಂದು ಹಳ್ಳಿಯೂ ಮಲೆನಾಡಿನ ರೀತಿ ಕಾಣುತ್ತಿದೆ. ಪ್ರತಿ ಗ್ರಾಮದಲ್ಲಿರುವ ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಳೆಯ ನೀರು ನುಗ್ಗಿದೆ. ಅಂತಹ ಕಡೆ ಇರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಗುರುವಾರ ಬೆಳಿಗ್ಗೆ 7 ಗಂಟೆಯಿಂದಲೇ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಎ.ಸಿ ಸೋಮಪ್ಪ ಕಾಡುಗೊಳ ಇವರುಗಳ ಸಹಕಾರದೊಂದಿಗೆ ತಾಲ್ಲೂಕಿನ ತಹಶೀಲ್ದಾರ್ ನಾಹಿದಾ ಜಮ್ ಜಮ್ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಪೆÇಲೀಸ್ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಚಿಲಗಾನಹಳ್ಳಿ ಗ್ರಾಮದ ಪ್ರತಿ ಮನೆಯಲ್ಲೂ ಮೊಣಕಾಲುದ್ದ ನೀರು ತುಂಬಿದ್ದು, ತಹಶೀಲ್ದಾರ್ ನಹಿದಾ ಜಮ್ ಜಮ್ ಖುದ್ದು ನೀರಿಗಿಳಿದು ಪರಿಶೀಲನೆ ನಡೆಸಿದರು.
ಮನೆಯೊಳಗಿದ್ದ ದವಸ ಧಾನ್ಯಗಳು ನೀರುಪಾಲು ಆಗಿದ್ದು, ಜನರಿಗೆ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.
ರಾತ್ರಿಯಿಡಿ ಚಿಕ್ಕ ಮಕ್ಕಳನ್ನು ಜೋಳಿಗೆಯಲ್ಲಿ ಮಲಗಿಸಿದ್ದರು. ಪೆÇೀಷಕರು ತೋಟದಲ್ಲಿರುವ ಮನೆಗಳು ಸಂಪೂರ್ಣ ಜಲಾವೃತವಾಗಿವೆ.
ಮಳೆ ಅವಾಂತರದಿಂದಾಗಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಅನೇಕ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಬೆಳಗಿನಿಂದ ಪ್ರತಿ ಗ್ರಾಮದಲ್ಲೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಮಳೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ, ಒತ್ತುವರಿಯಾಗಿರುವ ಸ್ಥಳಗಳ ತೆರವಿಗೆ ಸೂಚನೆ ನೀಡಲಾಗಿದ್ದು, ಮಳೆ ಕಡಿಮೆ ಆದ ನಂತರ ಒತ್ತುವರಿಯಾಗಿರುವ ಸ್ಥಳಗಳ ಸಂಪೂರ್ಣ ಮಾಹಿತಿ ಪಡೆದು ಒತ್ತುವರಿಯಾಗಿರುವ ಜಾಗಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.