ಕೊರಟಗೆರೆ:
ಪ್ರವಾಹ ಪರಿಹಾರ ಯೋಜನೆ ಮುಂದುವರಿದ ಭಾಗದಂತೆ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹುಲ್ಲಿಕುಂಟೆ, ಚನ್ನಗಾನಹಳ್ಳಿ ಗ್ರಾಮಗಳಲ್ಲಿ ಪರಿಹಾರ ಯೋಜನೆಯನ್ನು ಕೈಗೊಳ್ಳಲಾಯಿತು.
ಸುರಿಯುತ್ತಿರುವ ಬಾರಿ ಮಳೆಗೆ ಈ ಭಾಗ ಸಂಪೂರ್ಣವಾಗಿ ನೀರಿನಿಂದ ಮುಳುಗಡೆಯಾಗಿದೆ.ಇದರಿಂದ ಜನರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರು.ಮಳೆ ನೀರು ಮನೆಯ ಹೊರಗೆ ಮತ್ತು ಒಳಗಡೆಯಲ್ಲೆಲ್ಲ ನಿಂತಿದ್ದನ್ನು ಕಾಣಬಹುದಾಗಿತ್ತು.
ಅನೇಕ ಮನೆಗಳು ಶಿಥಿಲವಾಗಿದ್ದು ಸಣ್ಣ ಮಳೆ ಬಂದರೂ ನೀರು ಸೋರುವಿಕೆಯಿಂದ ಜನರು ತತ್ತರಿಸುತ್ತಿದ್ದರು. ಈ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಷನ್ ಹಾಗೂ ರೆಡ್ ಕ್ರಾಸ್ ಸಹಕಾರದಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೂ ದಿನಸಿ (ಅಕ್ಕಿ, ಬೇಳೆ, ಗೋಧಿ ಹಿಟ್ಟು, ಉಪ್ಪು, ಸಕ್ಕರೆ, ಸಾಂಬಾರ್ ಪದಾರ್ಥಗಳನ್ನೊಳಗೊಂಡ ಕಿಟ್), ಶುಚಿತ್ವದ ಕಿಟ್ (ಸೋಪು, ಟೂಥ್ ಪೇಸ್ಟ್, ಬ್ರಷ್, ಕೊಬ್ಬರಿ ಎಣ್ಣೆ ಇತ್ಯಾದಿಗಳು) ಶುಚಿತ್ವದ ಸ್ಯಾನಿಟೈಸರ್ ಹಾಗೂ ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ ಹಾಗೂ ವಯೋವೃದ್ಧರಿಗೆ ಸೊಳ್ಳೆ ಪರದೆಯನ್ನು ವಿತರಿಸಿದರು.
ಈ ಗ್ರಾಮಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಪೂಜ್ಯ ಸ್ವಾಮಿ ಜಪಾನಂದಜೀ ಅವರು ಹಾಗೂ ಅವರ ತಂಡದ ಸಹಕಾರದಿಂದ ಈ ನೆರೆ ಪರಿಹಾರ ಯೋಜನೆಯನ್ನು ಮುಂದುವರೆದು ಯಶಸ್ವಿಯಾಗಿ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕಿನ ತಹಶೀಲ್ದಾರ್ ನಹಿದಾ ಜಮ್ ಜಮ್ ಅವರು ಹಾಗೂ ಪೂಜ್ಯ ಸ್ವಾಮೀಜಿಯವರು ತಾಲ್ಲೂಕಿನ ಹುಲ್ಲಿಕುಂಟೆ, ಚನ್ನಗಾನಹಳ್ಳಿ ಗ್ರಾಮದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಗೀಡಾದ ಸಂತ್ರಸ್ತರಿಗೆ ನೆರವನ್ನು ನೀಡಿ ಧೈರ್ಯ ತುಂಬಿದರು.