ತುಮಕೂರು:


ನಗರದಲ್ಲಿ ಕಳೆದ 10 ದಿನಗಳಿಂದ ಸುರಿದ ಮಳೆಯಿಂದ ಮನೆ, ರಸ್ತೆಗಳಿಗೆ ಹಾನಿಯಾಗಿದ್ದು, ಸರ್ಕಾರ ತುರ್ತು ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಗರದಲ್ಲಿ ಕಳೆದ 10 ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದು ಸರಿಯಷ್ಟೆ. ಇದು ಅತಿದೃಷ್ಟೀಯಾಗಿದ್ದು ನಗರದಲ್ಲಿನ ಬಡಾವಣೆಗಳ ತಗ್ಗು ಪ್ರದೇಶದಲ್ಲಿ ನೀರು ಮುಂದಕ್ಕೆ ಹರಿಯದೇ ಅಲ್ಲಿ ನಿಂತು ಅತಿ ಹೆಚ್ಚು ಹಾನಿಯುಂಟುಮಾಡಿದೆ. ಇದರಿಂದ ಬಹಳಷ್ಟು ಮನೆಗಳಿಗೂ ತೊಂದರೆಯಾಗಿದೆ, ನಗರ ಪಾಲಿಕೆ ಆಯುಕ್ತರು ಶಿಥಿಲ ಕಟ್ಟಡ ತೆರವುಗೊಳಿಸಲು ಸೂಚಿಸಿರುವುದು ಸರಿಯೇ? ಎಂಬ ಚರ್ಚೆ ನಾಗರೀಕರಲ್ಲಿ ಮೂಡಿದೆ.
ತುಮಕೂರು ನಗರದಲ್ಲಿರುವ ಮಳೆ ನೀರಿನ ಚರಂಡಿಗಳು ಹೂಳುವಿನಿಂದ ತುಂಬಿದ್ದು, ಕಾಲಕಾಲಕ್ಕೆ ಅದರಲ್ಲಿಯೂ ಮಳೆಗಾಲ ಬರುವ ಮುಂಚೆಯೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿಲ್ಲ. ತುಮಕೂರು ನಗರದ ಮಧ್ಯಭಾಗದಲ್ಲಿರುವ ದೊಡ್ಡಚರಂಡಿಯನ್ನು ಸೇರುವ ಪ್ರಮುಖ ಚರಂಡಿಗಳ ಹೂಳು ತೆಗೆಯದ ಕಾರಣ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಲು ಕಾರಣವಾಯಿತು, ಉದಾ: ಸಿದ್ದಗಂಗಾ ಬಡಾವಣೆ, ಗುಬ್ಬಿ ಗೇಟ್, ಆಗ್ರಹಾರ ಇತ್ಯಾದಿ ನಗರದ ಹೊರಭಾಗದಲ್ಲಿ ರಾಯಕಾಲುವೆಗಳ ಒತ್ತುವರಿ, ಪ್ರಮುಖ ಚರಂಡಿಗಳ ಹೂಳು ತೆಗೆಯದೇ ಇರುವುದು ಸಹ ಈ ಅನಾಹುತಕ್ಕೆ ಕಾರಣವಾಗಿರುತ್ತದೆಯೆಂದು ನನ್ನ ಅನಿಸಿಕೆ, ಉದಾ: ಸದಾಶಿವನಗರ, ದಿಬ್ಬೂರು, ದೇವರಾಯಪಟ್ಟಣ, ಕ್ಯಾತ್ಸಂದ್ರ, ಗಂಗಸಂದ್ರ ಇತ್ಯಾದಿ.
ಇದರ ಜೊತೆಯಲ್ಲಿ ರಾಜ್ಯ ಸರಕಾರದ ಮುಖ್ಯ ಮಂತ್ರಿಗಳ ನಗರಾಭಿವೃದ್ದಿ ಯೋಜನೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಇತರೆ ಯೋಜನೆಗಳಲ್ಲಿ ತೆಗೆದುಕೊಂಡಿರುವ ಚರಂಡಿ, ಪುಟ್‍ಪಾತ್ ರಸ್ತೆ ಅಧಿಕಾರಿಗಳು ಅವೈಜ್ಞಾನಿಕ ರೀತಿಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದು, ಸ್ಥಳೀಯ ಸಂಸ್ಥೆಗಳ ತಾಂತ್ರಿಕ ವಿಭಾಗ, ಸ್ಮಾಟ್‍ಸಿಟಿ, ಕನ್ಸ್‍ಲ್ಟೆಂಟ್‍ಗಳು, ತಾಂತ್ರಿಕ ಸಿಬ್ಬಂದಿ, ನಗರಾಭಿವೃದ್ದಿ ಪ್ರಾಧಿಕಾರ ಇವರುಗಳ ಸಮನ್ವಯತೆಯ ಕೊರತೆಯಿಂದ, ತುಮಕೂರು ನಗರದಲ್ಲಿ ಇಷ್ಟೇಲ್ಲಾ ಅನಾಹುತವಾದರೂ ಸ್ಥಳೀಯ ಆಡಳಿತ ಯುದ್ದೋಪಾಧಿಯಲ್ಲಿ ಕೆಲಸ ನಿರ್ವಹಿಸದೇ ಕಾಲಹರಣ ಮಾಡುತ್ತಿರುವುದು ಖಂಡನೀಯ.
ಹೆಚ್ಚು ವಸತಿ ಪ್ರದೇಶಗಳಿಗೆ ಹಾನಿಗಿರುವುದು ಎಂಬುದನ್ನು ನಾನು ಬಡಾವಣೆಗಳಿಗೆ ಬೇಟಿ ಕೊಟ್ಟಾಗ ತಿಳಿದುಬಂದಿತ್ತು. ಇದರೊಂದಿಗೆ ನಗರದಲ್ಲಿರುವ ಕೆರೆ ಕಟ್ಟೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಸಣ್ಣ ನೀರಾವರಿ ಇಲಾಖೆ, ನಗರಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರ ಸರಿಯಾದ ಮಾಹಿತಿ ಇಟ್ಟುಕೊಳ್ಳದೇ ಸಮನ್ವಯತೆಯಿಂದ ಕೆಲಸ ನಿರ್ವಹಿಸದ ಕಾರಣ ಬಡಾವಣೆಯ ತಗ್ಗು ಪ್ರದೇಶಗಳ ಮುಳುಗಡೆಗೆ ಕಾರಣವಾಯಿತು ಎಂಬ ಸತ್ಯ ಸಂಗತಿಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಶಿಥಿಲವಾದ ಮನೆಗಳನ್ನು ತೆರವುಗೊಳಿಸಿ ಎಂದು ಬಡ-ಮಧ್ಯಮ ವರ್ಗದ ನಿವಾಸಿಗಳಿಗೆ ಕರೆಕೊಟ್ಟಿರುವ ನಗರ ಪಾಲಿಕೆ, ಮಳೆ ನೀರು ಬಡಾವಣೆಗಳಕಲ್ಲಿ ನಿಲ್ಲದಂತೆ ತೆಗೆದುಕೊಂಡಿರುವ ಕ್ರಮ ಏನು? ಎಂಬುದು ನಾಗರೀಕರಿಗೆ ತಿಳಿಯಬೇಕಾಗಿದೆ.
ಜಿಲ್ಲಾ ಆಡಳಿತದ ಮುಖ್ಯಸ್ಥರಾದ ತಾವು ನಗರದ ನಾಗರೀಕರಿಗೆ ತೊಂದರೆಯಾಗದಂತೆ, ಚರಂಡಿಗಳ ಹೂಳು ತೆಗೆದು ನೀರು ಸರಗವಾಗಿ ಕೆರೆ, ಕಟ್ಟೆಗಳಿಗೆ ಹೋಗಲು ಅಲ್ಲಿಂದ ಸ್ವಾಭಾವಿಕವಾಗಿ ಮುಂದೆ ಹರಿಯಲು ತಾವು ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತಾ ಇಲಾಖೆಯಲ್ಲಿರುವ ಜೆ.ಸಿ.ಬಿ ಹಾಗೂ ಇತರೆ ಯಂತ್ರಗಳು ಸಾಕಾಗದೇ ಇದ್ದ ಪಕ್ಷದಲ್ಲಿ ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರ ಜೆ.ಸಿ.ಬಿ ಯಂತ್ರಗಳನ್ನು ತಮ್ಮ ವಶಕ್ಕೆ ಪಡೆದು ಚರಂಡಿಗಳಲ್ಲಿ ಮಳೆ ನೀರು ನಿಲ್ಲದಂತೆ ಜನರಿಗೆ ಅನಾಹುತವಾಗದಂತೆ ಕ್ರಮ ಕೈಗೊಳ್ಳಲು ಕೋರಿದೆ. ಈ ಮೇಲಿನ ಚರಂಡಿ ಸಮಸ್ಯೆ, ಮನೆಪರಿಹಾರ, ರಸ್ತೆ ಹಾಳಾಗಿರುವುದು ವಾಸ್ತವ ಸಂಗತಿಗಳಿಂದ ಕೂಡಿದ್ದು, ತಕ್ಷಣ ಈ ಸಮಸ್ಯೆಗಳ ನಿವಾಹಣೆಗೆ ತುರ್ತು ಕ್ರಮಕೈಗೊಳ್ಳುತ್ತೀರೆಂದು ಹಾಗೂ ಈ ರೀತಿ ಸರ್ಕಾರದ ಅಧಿಕಾರಿಗಳು ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸಿ ಅನಾಹುತಕ್ಕೆ ಕಾರಣವಾಗಿರುವ ಇಂಜಿನಿಯರ್‍ಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

(Visited 2 times, 1 visits today)