ತುಮಕೂರು:


ವಿಶ್ವವಿದ್ಯಾನಿಲಯದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ನೂತನ ಕುಲಪತಿಗಳಾದ ಪ್ರೊ. ಎಂ ವೆಂಕಟೇಶ್ವರಲು ಅವರ ಸಮ್ಮುಖದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಶಿವಚಿತ್ತಪ್ಪ ಅವರಿಗೆ ಈ ಕೆಳಕಂಡ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ವಿಶ್ವವಿದ್ಯಾನಿಲಯದ ಎಬಿವಿಪಿ ಕಾರ್ಯಕರ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ಶೈಕ್ಷಣಿಕ ಸಮಸ್ಯೆಗಳಿಂದ ಎದುರಿಸುತ್ತಿದ್ದು, ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ 30,000 ಗಿಂತ ಅಧಿಕ ವಿದ್ಯಾರ್ಥಿಗಳಿದ್ದು, ಕ್ಯಾಂಪಸ್‍ನಲ್ಲಿ ಜಿಲ್ಲೆಯ ಗ್ರಾಮಾಂತರದಿಂದ 4,000 ವಿದ್ಯಾರ್ಥಿಗಳು ಓದುತ್ತಿದ್ದು, ಈ ಕೆಳಗಿನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 150 ಕ್ಕಿಂತ ಅಧಿಕ ಕಾಲೇಜುಗಳಿದ್ದು, 30,000 ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಮಾಡುತ್ತಿದಾರೆ. ಕೊರೋನಾ ಕಾರಣಾಂತರದಿಂದ ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪೂರ್ಣ ಪ್ರಮಾಣದ ಕ್ರೀಡಾ ಚಟುವಟಿಕೆ ನಡೆದಿರುವುದಿಲ್ಲ. ಇದರಿಂದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ. ಅಂತರ ವಿಶ್ವವಿದ್ಯಾನಿಲಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಪಂದನೆ ಸಿಗುತ್ತಿರುವುದಿಲ್ಲ. ಯಾವುದೇ ರೀತಿಯ ಕ್ರೀಡಾ ಸಮವಸ್ತ್ರವನ್ನು ಕೊಟ್ಟಿರುವುದಿಲ್ಲ. ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಶುಲ್ಕ 1000 ರೂಪಾಯಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಿಂದ ಅನುಕೂಲವಾಗುತ್ತಿಲ್ಲ. ಇನ್ನುಮುಂದೆ ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕ್ರೀಡಾ ಚಟುವಟಿಕೆಯನ್ನು ನಡೆಸಬೇಕು ಹಾಗೂ ಎಲ್ಲಾ ಕ್ರೀಡಾ ಪಟುಗಳಿಗೆ ಆಯಾ ಕ್ರೀಡೆಯ ಕ್ರೀಡಾ ಸಮವಸ್ತ್ರಗಳನ್ನು ಪೂರೈಸಬೇಕು.
ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆಟವಾಡಲು ಟೆನ್ನಿಸ್ ಕೋರ್ಟ್, ಬ್ಯಾಸ್ಕೆಟ್ ಬಾಲ್ ಕೋರ್ಟ್ ಇದ್ದು, ಕಳೆದ 3-4 ವರ್ಷಗಳಿಂದ ಸರಿಯಾದ ನಿರ್ವಹಣೆಯಿಲ್ಲದೆ ಎರಡು ಕೋರ್ಟ್‍ಗಳು ಹಾಳಾಗಿ ಹೋಗಿವೆ. ಎರಡು ಕೋರ್ಟ್‍ಗಳನ್ನು ನಿರ್ವಹಣೆ ಮಾಡಿ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು.
ವಿಶ್ವವಿದ್ಯಾನಿಲಯದ ಆವರಣದಲ್ಲಿ 4000 ಅಧಿಕ ವಿದ್ಯಾರ್ಥಿಗಳಿದ್ದು, ಕ್ಯಾಂಪಸ್ ಮೈದಾನದಲ್ಲಿ 4 ವಿಮಾನ ನಿಲ್ದಾಣ (ಹೆಲಿಪ್ಯಾಡ್) ವಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆ ಆಟವಾಡಲು ತೊಂದರೆಯುಂಟಾಗಿದೆ. ಹೆಲಿಪ್ಯಾಡ್ ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕು.
ವಿಶ್ವವಿದ್ಯಾನಿಲಯ ಆವರಣದಲ್ಲಿ ಘಟಕ ಕಾಲೇಜುಗಳಾದ ಕಲಾ ಕಾಲೇಜು, ವಿಜ್ಞಾನ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗದ 4000 ಅಧಿಕ ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗುವಷ್ಟು ನೀರಿನ ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಕೂರಲು ಆಗುತ್ತಿರುವುದಿಲ್ಲ. ಮತ್ತು ವಾಸನೆಯು ಹೆಚ್ಚಾಗುತ್ತಿದೆ. ಶೌಚಾಲಯದ ಸ್ವಚ್ಛತೆಯನ್ನು ಮಾಡಬೇಕು.
ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಪಾವತಿ ಶುಲ್ಕ ವಿದ್ಯಾರ್ಥಿನಿಲಯಗಳಾದ ಗಂಡು ಮತ್ತು ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ 300 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಹೆಣ್ಣು ಮಕ್ಕಳ ವಸತಿ ನಿಲಯವು 40 ವರ್ಷಗಳ ಹಳೆಯ ಕಟ್ಟಡವಾಗಿದೆ. ಶೌಚಾಲಯವು ಬಿದ್ದುಹೋಗುವ ಪರಿಸ್ಥಿತಿಯಿದ್ದು, ಕಟ್ಟಡವು ಶೀತಲ ವ್ಯವಸ್ಥೆಯಿದ್ದು, ಬಿದ್ದುಹೋಗುವ ಪರಿಸ್ಥಿತಿಯಿದೆ. ಗಂಡು ಮಕ್ಕಳ ವಸತಿ ನಿಲಯವನ್ನು ಸಹ ನಿರ್ವಹಣೆ ಮಾಡಬೇಕು. ಎರಡು ವಸತಿ ನಿಲಯಗಳ ಕಟ್ಟಡದ ಸುತ್ತಮುತ್ತಲೂ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಕಾಟ ಜಾಸ್ತಿಯಾಗುತ್ತಿದೆ. ಇದನ್ನು ಸ್ವಚ್ಛತೆ ಮಾಡಿಸಬೇಕು. ಎರಡು ವಿದ್ಯಾರ್ಥಿ ನಿಲಯಗಳ ವಸತಿ ಕಟ್ಟಡ (ಹಾಸ್ಟೆಲ್) ಗಳನ್ನು ಶಿಥಿಲವಾಗಿರುವ ಭಾಗವನ್ನು ದುರಸ್ಥಿಗೊಳಸಿ, ಹಾಗೂ ಸರಿಯಾಗಿ ನಿರ್ವಹಣೆ ಮಾಡಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು.
ಗ್ರಾಮೀಣ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ನಂತರ ಉದ್ಯೋಗ ಸಿಗಬಹುದೆಂದು ಕನಸಿನೊಂದಿಗೆ ಬರುತ್ತಾರೆ. ಆದರೆ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಯಾವುದೇ ರೀತಿಯ ಕ್ಯಾಂಪಸ್ ಸಂದರ್ಶನಗಳು ನಡೆದಿರುವುದಿಲ್ಲ. ಆದಕಾರಣ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಲುವಾಗಿ ಕ್ಯಾಂಪಸ್ ಸಂದರ್ಶನವನ್ನು (ಉದ್ಯೋಗಮೇಳ) ಏರ್ಪಡಿಸಬೇಕು.
ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಆವರಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಉಪಹಾರ ಹಾಗೂ ಊಟವನ್ನು ಹೊರಗಡೆ ಹೋಗಿ ಹೆಚ್ಚಿನ ದರವನ್ನು ಕೊಟ್ಟು ತಿನ್ನಬೇಕಾದ ಪರಿಸ್ಥಿತಿಯಿದೆ. ಆದ್ದರಿಂದ ಕ್ಯಾಂಪಸ್ ಆವರಣದಲ್ಲಿ ಕ್ಯಾಂಟೀನ್ ವ್ಯವಸ್ಥೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ಸಿಗುವಂತೆ ಮಾಡಬೇಕು.
ಸ್ನಾತಕೋತ್ತರ ವಿದ್ಯಾರ್ಥಿಗಳು ಕೆಲವು ವಿಭಾಗದಲ್ಲಿ ಕಾಲೇಜು ಶುಲ್ಕ ಮತ್ತು ಪರೀಕ್ಷಾ ಶುಲ್ಕ, ಹೆಚ್ಚಿನ ಶುಲ್ಕವನ್ನು ತುಂಬಿಕೊಳ್ಳುತ್ತಿದ್ದು, ಬಡ ಮತ್ತು ಗ್ರಾಮೀಣ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು.
ಈ ಎಲ್ಲಾ ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಪರವಾಗಿ ಮನವಿಯನ್ನು ನೀಡಲಾಯಿತು. ಈ ಸಮದರ್ಭದಲ್ಲಿ ಎಬಿವಿಪಿ ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ತುಮಕೂರು ವಿವಿ ಘಟಕದ ಕಾರ್ಯದರ್ಶಿ ರೇಣುಕಾ ಪ್ರಸಾದ್, ಕಾರ್ಯಕರ್ತರಾದ ಮಂಜೇಶ್, ಶ್ರೀಧರ್, ಕಾರ್ತಿಕ್, ಹರೀಶ್, ಮದನ, ಕೇದಾರನಾಥ, ನಂದೀಶ್, ಧನುಷ್, ಚರಣ, ವರುಣ್ ದನುಷ್ ಇತರರು ಉಪಸ್ಥಿತರಿದ್ದರು.

(Visited 2 times, 1 visits today)