ತುಮಕೂರು:
ಎಲ್ಲಾ ಮಕ್ಕಳು ಜಂತು ನಿವಾರಣಾ ಮಾತ್ರೆಗಳನ್ನು ಸೇವಿಸುವಂತೆ ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ|| ಕೆ. ವಿದ್ಯಾಕುಮಾರಿ ತಿಳಿಸಿದರು.
ಶಿರಾಗೇಟ್‍ನ ಅರಳಿಮರಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇಂದು ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಜಂತು ನಿವಾರಣಾ ಮಾತ್ರೆಗಳನ್ನು ಸೇವಿಸುವಂತೆ ಜವಾಬ್ದಾರಿ ವಹಿಸಬೇಕೆಂದು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಸಾಂಕೇತಿಕವಾಗಿ ಮಕ್ಕಳಿಗೆ ಮಾತ್ರೆ ವಿತರಿಸಿ ಚೀಪಿ ಸೇವಿಸುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ 86 ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ||ಮಂಜುನಾಥ ಡಿ.ಎನ್. ರವರು ಮಾತನಾಡಿ, ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ 813162 ಮಕ್ಕಳಿದ್ದು, ಅಂಗನವಾಡಿ ಕೇಂದ್ರ, ಶಾಲೆಗಳು, ಪದವಿ ಪೂರ್ವ ಕಾಲೇಜು, ತಾಂತ್ರಿಕ ಕಾಲೇಜು ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೊಲ್ ಮಾತ್ರೆಯನ್ನು ನೀಡಲಾಗುತ್ತಿದ್ದು, ಎಲ್ಲಾ ಅರ್ಹ ಮಕ್ಕಳು ಮಾತ್ರೆಯನ್ನು ಸೇವಿಸಬೇಕು. ಜಂತುಹುಳು ಬಾಧೆ ನಿಯಂತ್ರಿಸಲು ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಹಾಗೂ ಚಪ್ಪಲಿಗಳನ್ನು ಧರಿಸಿ ಓಡಾಡಬೇಕೆಂದು ಸಲಹೆ ನೀಡಿದರು. ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಅಧಿಕಾರಿಗಳಾದ ಡಾ|| ಕೇಶವ್ ರಾಜ್ ಜಿ. ಅವರು ಮಾತನಾಡಿ, ರಕ್ತಹೀನತೆಗೆ ಮುಖ್ಯ ಕಾರಣ ಜಂತುಹುಳು ಬಾಧೆಯಾಗಿದ್ದು, ವರ್ಷಕ್ಕೆರಡು ಬಾರಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ನೆಡೆಯುತ್ತದೆ. 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೊಲ್ ಮಾತ್ರೆಯನ್ನು ನೀಡಲಾಗುತ್ತಿದ್ದು, ಇಂದು ಅಲ್ಬೆಂಡಜೊಲ್ ಮಾತ್ರೆಯನ್ನು ಪಡೆಯದ ಮಕ್ಕಳಿಗೆ ಆಗಸ್ಟ್ 17, 2022ರ ಮಾಪ್ ಅಪ್ ದಿನದಂದು ಮಾತ್ರೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಡಾ|| ಭವ್ಯ ಮತ್ತು ಡಾ|| ರಶ್ಮಿ ಆರ್.ಬಿ.ಎಸ್.ಕೆ ತಂಡದ ವೈದ್ಯಾಧಿಕಾರಿಗಳು ವೈಯಕ್ತಿಕ ಸ್ವಚ್ಚತೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿರುವ 6 ವಿಧಾನಗಳಲ್ಲಿ ಕೈ ತೊಳೆಯುವಿಕೆಯನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ|| ಲಕ್ಷ್ಮಿಕಾಂತ್, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಅರುಣ್ ಕುಮಾರ್, ಆಡಳಿತ ವೈದ್ಯಾಧಿಕಾರಿಗಳಾದ ಡಾ|| ಜ್ಯೋತಿ, ಮುಖ್ಯ ಶಿಕ್ಷಕರಾದ ಮಹೇಂದ್ರಪ್ಪ, ಶಿರಾಗೇಟ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿಷೇಕ್, ಜಿಲ್ಲಾ ಸಂಯೋಜಕರು, ಎಸ್.ಬಿ.ಸಿ.ಸಿ ಜಿಲ್ಲಾ ಪಂಚಾಯತ್, ಸಿಬ್ಬಂದಿ ವರ್ಗದವರು ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಯಣ್ಣ ಹೆಚ್ ಹಾಜರಿದ್ದರು.