ಗುಬ್ಬಿ:
ತಾಲ್ಲೂಕಿನ ನಿಟ್ಟೂರು ಹೋಬಳಿ ತ್ಯಾಗ ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭೈರಮ್ಮ ಈಶ್ವರಯ್ಯ ಅವಿರೋಧವಾಗಿ ಬುಧವಾರ ಆಯ್ಕೆಯಾದರು.
ತ್ಯಾಗಟೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಪ ತಹಸೀಲ್ದಾರ್ ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಎಸ್.ಸಿ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ವಿಜಯ ಲಕ್ಷ್ಮಮ್ಮ ರಾಜೀನಾಮೆ ಸಲ್ಲಿಸಿದ ಹಿನ್ನಲೆ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತ್ಯಾಗ ಟೂರು ಗ್ರಾಮ ಪಂಚಾಯಿತಿ ಸದಸ್ಯೆ ಭೈರಮ್ಮ ನಾಮಪತ್ರ ಸಲ್ಲಿಸಿದ್ದರು. ಏಕೈಕ ನಾಮಪತ್ರ ಹಿನ್ನಲೆ ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಭೈರಮ್ಮ, ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಎನಿಸಿದ ತ್ಯಾಗ ಟೂರು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸರ್ವ ಸದಸ್ಯರ ಸಹಕಾರ ಪಡೆಯಲಾಗುವುದು.
ಈ ಜತೆಗೆ ಚುನಾಯಿತ ಜನಪ್ರತಿನಿಧಿಗಳ ಮೂಲಕ ಸರ್ಕಾರದಿಂದ ವಿಶೇಷ ಅನುದಾನ ತಂದು ಮೂಲಭೂತ ಸವಲತ್ತು ಒದಗಿಸಲು ಬದ್ಧನಾಗಿರುತ್ತೇನೆ. ಜಿಲ್ಲೆಯಲ್ಲೇ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ವಸತಿ ಯೋಜನೆ, ಕುಡಿಯುವ ನೀರು, ರಸ್ತೆ ಹೀಗೆ ಅನೇಕ ಸೌಲಭ್ಯ ಒದಗಿಸಿ ಪಂಚಾಯಿತಿ ಆದಾಯ ಮೂಲ ವೃದ್ಧಿಗೊಳ್ಳಿಸುವುದಾಗಿ ತಿಳಿಸಿದರು.
ಸರ್ಕಾರದಿಂದ ಬರುವ ಎಲ್ಲಾ ಅನುದಾನವನ್ನು ಸದ್ಬಳಕೆ ಮಾಡಿ ಗುಡಿಸಲು ಮುಕ್ತ ಗ್ರಾಮಗಳ ರಚನೆಗೆ ವಸತಿ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ. ಜೊತೆಗೆ ಕುಡಿಯುವ ನೀರು ಸೌಲಭ್ಯ, ಸ್ವಚ್ಛತೆಗೆ ಆದ್ಯತೆ ಹಾಗೂ ಇಲ್ಲಿನ ಕೃಷಿಕ ವರ್ಗಕ್ಕೆ ಅನುಕೂಲ ಮಾಡುವ ನೀರಾವರಿ ಯೋಜನೆ ಸಾಕಾರಗೊಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್ ಸ್ವಾಮಿ, ಜಗದೀಶ್, ಲಕ್ಷ್ಮೀಪತಿ ಕೆ.ಜಿ. ಭವ್ಯ ಪರಮೇಶ್, ಮಂಜುನಾಥ್,ಚಿಕ್ಕ ಹನುಮಂತಯ್ಯ, ಗುತ್ತಿಗೆದಾರರಾದ ಅದಲಗೆರೆ ಮಹಾದೇವಯ್ಯ, ಕಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಲ್.ರವಿಕುಮಾರ್, ಭಾಗ್ಯಮ್ಮ, ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಲ್ಲೇಶ್, ಮುಖಂಡರಾದ ಹಾಗೂ ದಲಿತ ಮುಖಂಡರಾದ ಮಾರಶೆಟ್ಟಿಹಳ್ಳಿ ಬಸವರಾಜು, ಕುಂದರನಹಳ್ಳಿ ನಟರಾಜು, ಕೃಷ್ಣಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಾಂಜನೇಯ ಹಾಗೂ ಇನ್ನಿತರರು ಹಾಜರಿದ್ದರು.