ತುಮಕೂರು:
ನಗರದ 15ನೇ ವಾರ್ಡಿಗೆ ಸಂಬಂಧಿಸಿದಂತೆ ಪ್ರತಿ ರಸ್ತೆ, ಬಡಾವಣೆಗಳ ಗುರುತಿಗಾಗಿ ನಾಮಫಲಕ ಹಾಕುವ ಕಾರ್ಯಕ್ಕೆ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಚಾಲನೆ ನೀಡಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಗಾಂಧಿನಗರ ಮುಖ್ಯರಸ್ತೆಗೆ ನಾಮಫಲಕ ಅಳವಡಿಸಲು ಪೂಜೆ ನೆರವೇರಿಸಿದ ನಂತರ ಮಾತನಾಡಿದ ಪಾಲಿಕೆಯ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್,ಸ್ಮಾರ್ಟ್ ಸಿಟಿವತಿಯಿಂದ 15ನೇ ವಾರ್ಡಿನಲ್ಲಿ ಕೈಗೊಂಡಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೇಲೆಯಲ್ಲಿ ವಾರ್ಡಿನ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ.15ನೇ ವಾರ್ಡಿನಲ್ಲಿ ಸುಮಾರು 120 ಕ್ಕೂ ಹೆಚ್ಚು ರಸ್ತೆ ಮತ್ತು ತಿರುವುಗಳಿದ್ದು, ಹಂತ ಹಂತವಾಗಿ ಎಲ್ಲಾ ತಿರುವುಗಳಿಗೂ ಪಾಲಿಕೆಯಿಂದ ನಾಮಫಲಕ ಅಳವಡಿಸಲಾಗುವುದು.ನಾಮಫಲಕಗಳಿಗೆ ಬಡಾವಣೆಯ ಹೆಸರು, ಎಷ್ಟನೇ ತಿರುವು ಎಂದು ನಮೂದಿಸುವುದರ ಜೊತೆಗೆ,ಕನ್ನಡ ಸಾಹಿತಿಗಳ ಹೆಸರನ್ನು ಅಳವಡಿಸುವ ಮೂಲಕ ಅವರುಗಳ ಹೆಸರನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ನಾಮಫಲಕ ಅಳವಡಿಸುವುದರಿಂದ ನಗರಕ್ಕೆ ಹೊರಗಡೆಯಿಂದ ಬರುವವರಿಗೆ ಸುಲಭವಾಗಿ ತಾವು ಹೋಗಬೇಕಾದ ಬಡಾವಣೆ, ತಿರುವುಗಳನ್ನು ಪತ್ತೆ ಹೆಚ್ಚಲು ಸಾಧ್ಯವಾಗುತ್ತದೆ.ಅಲ್ಲದೆ ಕನ್ನಡ ಸಾಹಿತಿಗಳ ಹೆಸರುಗಳನ್ನು ಹಾಕುವುದರಿಂದ ಯುವಜನರಿಗೆ, ಸಾರ್ವಜನಿಕರಿಗೆ ಅವರ ಪರಿಚಯವನ್ನು ಮಾಡಿದಂತಾಗುತ್ತದೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಾಯವನ್ನು ಪಡೆಯಲಾಗಿದೆ.ನಮ್ಮ ವಾರ್ಡಿನ ರೀತಿಯಲ್ಲಿಯೇ ಇಡೀ ನಗರಕ್ಕೆ ನಾಮಫಲಕ ಅಳವಡಿಸುವ ಕೆಲಸವನ್ನು ಪಾಲಿಕೆ ಮಾಡಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದು ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ನಗರದ ಪ್ರತಿ ರಸ್ತೆಗಳಿಗೂ ನಾಮಫಲಕ, ಆ ಫಲಕಗಳಲ್ಲಿ ಕನ್ನಡ ಕವಿಗಳ ಹೆಸರು ನಮೂದಿಸುವುದು ಒಂದು ಒಳ್ಳೆಯ ಕೆಲಸ. ಇದರ ಜೊತೆಗೆ ನಗರದ ಸಾಧಕರು, ಸ್ವಾತಂತ್ರ ಹೋರಾಟಗಾರರ ಹೆಸರನ್ನು ಸಹ ಹಾಕಿದರೆ ಹೆಚ್ಚು ಸೂಕ್ತ ಎಂಬುದು ನಮ್ಮ ಸಲಹೆಯಾಗಿದೆ.ಈ ನಿಟ್ಟಿನಲ್ಲಿ 15ನೇ ವಾರ್ಡಿನ ಕಾರ್ಪೋರೇಟರ್ ಅವರ ಕಾರ್ಯ ಶ್ಲಾಘನೀಯ ಎಂದರು. ವಾರ್ಡಿನ ಹಿರಿಯ ನಾಗರಿಕ ಎನ್.ನಾಗರಾಜು ಮಾತನಾಡಿ, ತುಮಕೂರು ನಗರ ಬೆಳೆದಿದ್ದರೂ ವ್ಯವಸ್ಥಿತವಾಗಿ ಬೆಳೆದಿರಲಿಲ್ಲ. ಸ್ಮಾರ್ಟ್‍ಸಿಟಿಯ ಅನುದಾನದಲ್ಲಿ ರಸ್ತೆಗಳ ಅಭಿವೃದ್ದಿಯ ಜೊತೆಗೆ, ನಾಮಫಲಕ ಅಳವಡಿಸುವುದರಿಂದ ಹಿರಿಯರಿಗೆ, ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.ಅದರಲ್ಲಿಯೂ ರಾತ್ರಿವೇಳೆ ವಿನುಗುವಂತಹ ರಿಪ್ಲೆಕ್ಟರ್ ನಾಮಫಲಕದಿಂದ ರಾತ್ರಿ ವೇಳೆ ನಗರಕ್ಕೆ ಬರುವವರಿಗೆ ಬಡಾವಣೆಗಳಿಗೆ ಹೋಗಲು ದಾರಿ ತೋರಿದಂತಾಗುತ್ತದೆ ಎಂದರು.
ಈ ವೇಳೆ ವಾರ್ಡಿನ ಹಿರಿಯರಾದ ನಿವೃತ್ತ ಎಂಜಿನಿಯರ್ ರವೀಶ್,ನಾಗರಾಜು, ಗುತ್ತಿಗೆದಾರರಾದ ಶಿವಕುಮಾರ್, ನವರತ್ನ ಬಾರ್ ನಾಗರಾಜು, ಹೆಬ್ಬೂರು ಶ್ರೀನಿವಾಸಮೂರ್ತಿ, ಕನ್ನಡ ಸೇನೆಯ ಧನಿಯಕುಮಾರ್ ಸೇರಿದಂತೆ ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.