ತುರುವೇಕೆರೆ:
ತಾಲೂಕಿನ ಬೀಚನಹಳ್ಳಿಯ ಆರ್.ಟಿ.ಐ ಕಾರ್ಯಕರ್ತ ಕಿರಣ್‍ಕುಮಾರ್ ಕೊಲೆ ಆರೋಪದ ಮೇಲೆ ಶಂಕಿತ ಇಬ್ಬರು ಆರೋಪಿಗಳನ್ನು ಪೋಲಿಸರು ಬಂದಿಸುವಲ್ಲಿ ಯಶ್ವಸ್ವಿಯಾಗಿದ್ಧಾರೆ.
ಮೇ 13 ರಂದು ಬೀಚನಹಳ್ಳಿಯ ಕಿರಣ್ ಕುಮಾರ್ (50) ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಶವವನ್ನು ಸಮಾಧಿ ಮಾಡಲಾಗಿತ್ತು. ಆದರೆ ಕಿರಣ್ ಕುಮಾರ್ ರವರ ಸಾವಿನಲ್ಲಿ ಅನುಮಾನವಿದೆ ಎಂದು ಕಿರಣ್‍ಕುಮಾರ್ ತಮ್ಮನ ಮಗ ವೈಭವ್ ಅನುಮಾನ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಕುಣಿಕೇನಹಳ್ಳಿ ಜಗದೀಶ್ ಬಳಿ ತನ್ನ ನೋವನ್ನು ತೋಡಿಕೊಂಡಿದ್ದ ಅದರಂತೆ ಸಂಘಟನೆಯ ಸಹಾಯ ಪಡೆದು ತಮ್ಮನ ಮಗ ವೈಭವ್ ಜುಲೈ 4 ರಂದು ಪೋಲಿಸರಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಜುಲೈ 26 ರಂದು ಉಪವಿಭಾಗಾಧಿಕಾರಿ ಸಿ.ಆರ್.ಕಲ್ಪಶ್ರೀ ಸಮ್ಮುಖದಲ್ಲಿ ಕಿರಣ್‍ಕುಮಾರ್ ಶವವನ್ನು ಸಮಾಧಿಯಿಂದ ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಿ ಕೆಲವು ದೇಹದ ಅಂಗಾಂಗಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರ ಮರಣೋತ್ತರ ವರದಿಯನ್ವಯ ಕಿರಣ್ ಕುಮಾರ್ ಸಾವು ಸಹಜವಲ್ಲ. ಅಸಹಜ ಹಾಗೂ ತಲೆಗೆ ಪೆಟ್ಟುಬಿದ್ದು ಸಾಯಿಸಲಾಗಿದೆ ಎಂದು ನೀಡಿದ ವರದಿಯನ್ವಯ ದಂಡಿನಶಿವರ ಪೋಲಿಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ.
ಮೃತ ಕಿರಣ್ ಕುಮಾರ್ ಆತನ ಅಕ್ಕನ ಮಗ ಚೇತನ್ ಹಾಗೂ ಸ್ನೇಹಿತ ಕಾಂತರಾಜು ಎಂಬುವವರು ಕೊಲೆ ಮಾಡಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಕಿರಣ್‍ಕುಮಾರ್ ಆಸ್ತಿಯನ್ನು ಲಪಟಾಯಿಸುವ ಸಲುವಾಗಿ ಈ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಚೇತನ್ ಈಗಾಗಲೇ ಗೋಡೇಕೆರೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಜೈಲಿನಲ್ಲಿ ಪರಿಚಿತನಾಗಿದ್ದ ಕಾಂತರಾಜ್ ನೂ ಸಹ ಜಾಮೀನಿನ ಮೇಲೆ ಬಂದಿದ್ದ. ಕಾಂತರಾಜ್ ನೂ ಸಹ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೋಲಿಸರು ಮಾಹಿತಿ ತಿಳಿಸಿದ್ಧಾರೆ. ಇಬ್ಬರು ಸಹ ಮೇ 12 ರಂದು ಬೀಚನಹಳ್ಳಿಯ ಕಿರಣ್ ಕುಮಾರ್ ರವರ ಮನೆಗೆ ತೆರಳಿ ರಾತ್ರಿ ಕಿರಣ್ ಕುಮಾರ್ ಸಾಯಿಸಿ ನಂತರ ಗೋಡೆಗೆ ತಲೆಯನ್ನು ಚಚ್ಚಿ ಹತ್ಯೆಗೈದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆಂದು ಪೋಲಿಸರು ತಿಳಿಸಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಅಡಿಷನಲ್ ಎಸ್ಪಿ ಉದೇಶ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಗೋಪಾಲ ನಾಯ್ಕ್ ಮತ್ತು ದಂಡಿನಶಿವರ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರಪ್ಪನವರು ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ, ಸದ್ಯ ಕಿರಣ್ ಕುಮಾರ್ ಅಕ್ಕನ ಮಗ ಚೇತನ್‍ನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾಂತರಾಜ್ ಪೋಲಿಸ್ ಕಸ್ಟಡಿಗೆ ತೆಗೆದುಕೊಂಡು ಇತರೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ರಮೇಶ್ ತಿಳಿಸಿದ್ದಾರೆ.