ತುಮಕೂರು:
ದಲಿತರನ್ನು ಕೇವಲ ಮತಬ್ಯಾಂಕುಗಳಾಗಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಪರ್ಯಾಯವಾಗಿ ದಲಿತರು, ಹಿಂದುಳಿದವರ್ಗದವರು, ಮುಸ್ಲಿಂರು ಹಾಗೂ ಬಡವರು ಸೇರಿ ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕುತ್ತಿದ್ದು, 2022ರ ಸೆಪ್ಟಂಬರ್ 14 ರಂದು ಬಡವರ, ಶ್ರಮಿಕರ ಪಕ್ಷ ರಾಷ್ಟ್ರದಲ್ಲಿ ಉದಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 75 ವರ್ಷಗಳ ಕಾಲ ಅಧಿಕಾರ ನಡೆಸಿದ ನಡೆಸಿದ ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಪಕ್ಷಗಳು ಈ ದೇಶದ ದಲಿತರನ್ನು ಅತ್ಯಂತ ನಿಕೃಷ್ಟವಾಗಿ ಕಂಡಿದೆ. ಬಡತನ, ನಿರುದ್ಯೋಗ, ಅಸ್ಪøಷ್ಯತೆ, ದಲಿತರ ಮೇಲಿನ ದೌರ್ಜನ್ಯ ಇಂದಿಗೂ ನಿಂತಿಲ್ಲ.ದಲಿತರ ಪಾಲಿಗೆ ಬದಲಾವಣೆ ಎಂಬುದು ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ,ರಾಜ್ಯದ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ನಿರಂತರ ಚರ್ಚೆ ನಡೆಸಿ, ಒಂದು ರಾಜಕೀಯ ಪಕ್ಷವನ್ನು ಹುಟ್ಟು ಹಾಕುವ, ಆ ಮೂಲಕ ರಾಜಕಾರಣದಲ್ಲಿ ಬಡವರಿಗೂ ಸ್ಥಾನಮಾನ ದೊರಕಿಸುವ ಪ್ರಯತ್ನ ಇದಾಗಿದೆ ಎಂದರು.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ 2022ರ ಸೆಪ್ಟಂಬರ್ 14 ರಂದು ನಡೆಯುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮ್ಮೇಳನ ಮತ್ತು ರಾಜಕೀಯ ಪಕ್ಷ ಸ್ಥಾಪನಾ ಸಮಾರಂಭ, ದೇಶ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ.ಸಂವಿಧಾನದ ಆಶಯವಾದ ರಾಜಕೀಯ, ಆರ್ಥಿಕ, ಸಾಮಾಜಿಕ ಸಮಾನತೆಗಾಗಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಡಾ.ಎನ್.ಮೂರ್ತಿ ತಿಳಿಸಿದರು.
ದೇಶವನ್ನು ಸುಮಾರು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ದಲಿತರ ಅಭಿವೃದ್ದಿ ಹೆಸರಿನಲ್ಲಿ ಕೆಲ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದನ್ನು ಬಿಟ್ಟರೆ,ಇಡೀ ಸಮುದಾಯದ ಸಮಗ್ರ ಅಭಿವೃದ್ದಿಗೆ ಅಗತ್ಯವಿರುವ ಯಾವುದೇ ಯೋಜನೆ ಮಾಡಲಿಲ್ಲ.ಕಳೆದ ಎಂಟು ವರ್ಷಗಳ ಬಿಜೆಪಿ ಆಡಳಿತದಲ್ಲಿ ದಲಿತರ ಸ್ಥಿತಿ ಮತ್ತಷ್ಟು ಕುಸಿದಿದೆ.ಸರಕಾರದ ಅವೈಜ್ಞಾನಿಕ ಯೋಜನೆಗಳಿಂದ ರೈತರು,ಕೂಲಿಕಾರ್ಮಿಕರು,ದುರ್ಬಲರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಿ.ಟಿ.ಸಿ.ಎಲ್. ಕಾಯ್ದೆಗೆ ತಿದ್ದುಪಡಿ ತರಲು ಮೀನಾಮೇಷ ಎಣಿಸಿದ ಪರಿಣಾಮ ದಲಿತರ ಸಾವಿರಾರು ಎಕರೆ ಭೂಮಿ ಉಳ್ಳುವರ ಪಾಲಾಗುತ್ತಿದೆ.ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಆದು ರಾಜಕೀಯ ಬದಲಾವಣೆ. ಇದು ದಕ್ಷಿಣ ಭಾರತದಿಂದಲೇ ಆರಂಭವಾಗಲಿದೆ ಎಂದರು.
ಬಿಜೆಪಿ ಕಳೆದ ಎಂಟು ವರ್ಷಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಕೋಮುಗಳ ನಡುವೆ ವಿಷ ಬೀಜ ಬಿತ್ತಿ,ಜನರನ್ನು ಒಡೆದ ಆಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ದಲಿತರು ಯಾವ ಮನಸ್ಥಿತಿಯಲ್ಲಿ ಸ್ವಾತಂತ್ರದ ಅಮೃತಮಹೋತ್ಸವ ಆಚರಿಸಬೇಕೆಂದು ಡಾ.ಎನ್.ಮೂರ್ತಿ ಪ್ರಶ್ನಿಸಿದರು.