ತುಮಕೂರು:
ಕಳೆದ ಎರಡರ ದಶಕಗಳಿಂದ ಬಿಹಾರ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯ ತೊರೆದಿರುವುದಕ್ಕೆ ರಾಜ್ಯ ಜೆಡಿಯು ಬೆಂಬಲ ನೀಡಲಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.
ಇತ್ತಿಚೆಗೆ ಅಪಘಾತಕ್ಕೀಡಾಗಿ ಚೇತರಿಸಿಕೊಳ್ಳುತ್ತಿರುವ ಜೆಡಿಯು ಜಿಲ್ಲಾಧ್ಯಕ್ಷ ಕೆಜಿಎಲ್ ರವಿ ಅವರ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸುವಲ್ಲಿ, ಶೂನ್ಯ ಸಹಿಷ್ಣುತೆಯ ಮೂಲಕ ಸುಭದ್ರ ಆಡಳಿತವನ್ನು ನೀಡುತ್ತಿರುವ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನಿತೇಶ್ ಕುಮಾರ್ ಪಕ್ಷಕ್ಕೆ ಆಗಿರುವ ಅವಮಾನವನ್ನು ವಿರೋಧಿಸಿ ಸಖ್ಯವನ್ನು ತೊರೆದುಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ನಿತೇಶ್‍ಕುಮಾರ್ ಅವರ ನಡೆಯನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಕೇಂದ್ರ ಸಚಿವ ಆರ್.ಸಿ.ಪಿ.ಸಿಂಗ್ ಅವರು ರಾಜಕೀಯ ದುರುದ್ದೇಶದಿಂದ ಪಕ್ಷದ ಬಗ್ಗೆ ಹಾಗೂ ನಾಯಕರುಗಳ ಬಗ್ಗೆ ಅನುಚಿತ ಮಾತನಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.
ಬಿಹಾರದ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸುವ ಮೂಲಕ ಬದಲಾವಣೆಯ ಹರಿಕಾರರಾಗಿರುವ ಶ್ರೀ ನಿತೀಶ್‍ಕುಮಾರ್ ಅವರ ಬೆಂಬಲಕ್ಕೆ ರಾಜ್ಯದ ಎಲ್ಲ ಪದಾಧಿಕಾರಿಗಳು ಮತ್ತು ಮುಖಂಡರು ನಿಲ್ಲುವುದಾಗಿ ಹೇಳಿದ ಅವರು, ರಾಮಚಂದ್ರ ಪ್ರಸಾದ್ ಸಿಂಗ್ ಅವರ ರಾಜೀನಾಮೆ ನಂತರ ನಡೆದಿರುವ ಬೆಳವಣಿಗೆ ಪಕ್ಷ ನೈಜ ಕಾರ್ಯಕರ್ತರಿಗೆ ಬಲವನ್ನು ತುಂಬಿದೆ ಎಂದು ತಿಳಿಸಿದರು.
ನಿತೀಶ್‍ಗೆ ಅಭಿನಂದನೆ: 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸುತ್ತಿರುವ ನಿತೀಶ್ ಕುಮಾರ್ ರವರಿಗೆ ಕರ್ನಾಟಕ ಪ್ರದೇಶ ಜನತಾದಳ (ಸಂಯುಕ್ತ )ಹಾಗು ತುಮಕೂರು ಜಿಲ್ಲಾ ಜನತಾದಳ ಅಭಿನಂದನೆ ಸಲ್ಲಿಸಿದ್ದು, 8ನೇ ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸವನ್ನು ಸೃಷ್ಠಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ್, ಉದಯ್ ಕುಮಾರ್ ಇತರರಿದ್ದರು.