ತುಮಕೂರು:


ಕೇಂದ್ರ ಸರಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಮೂಲಕ ನೈಲಾನ್ ಮತ್ತು ಪಾಲಿಸ್ಟರ್ ವಸ್ತುಗಳಿಂದ ತಯಾರಿಸಿದ ರಾಷ್ಟ್ರದ್ವಜ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ, ನೇಕಾರರ ಹೊಟ್ಟೆಯ ಮೇಲೆ ಒಡೆದಿದೆ ಎಂದು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಆಗಸ್ಟ್ 17 ರಂದು ನಡೆಸಲು ಉದ್ದೇಶಿಸಿರುವ 8ನೇ ಅಂತರರಾಷ್ಟ್ರೀಯ ನೇಕಾರರ ದಿವಸ ಕಾರ್ಯಕ್ರಮದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನೇಕಾರರ ಸಮುದಾಯದÀ ಕುರುಹಿನ ಶೆಟ್ಟಿ, ತೋಗಟವೀರ, ಪದ್ಮಶಾಲಿ, ದೇವಾಂಗ ಸಮುದಾಯದ ಮುಖಂಡರಾದ ರಾಮಕೃಷ್ಣಯ್ಯ, ಧನಿಯಕುಮಾರ್, ಅನಿಲ್‍ಕುಮಾರ್, ಎಸ್.ವಿ.ವೆಂಕಟೇಶ್, ಎಸ್.ಎನ್.ರಂಗಸ್ವಾಮಿ, ಯೋಗಾನಂದ, ಕರಿಯಪ್ಪ ಮತ್ತಿತರರು ಸರಕಾರದ ನಡೆಯನ್ನು ಖಂಡಿಸಿದರು.
ಜಿಲ್ಲಾ ನೇಕಾರರ ಸಮುದಾಯದ ಕಾರ್ಯದರ್ಶಿ ಧನಿಯಕುಮಾರ್, ರಾಷ್ಟ್ರಧ್ವಜಕ್ಕೆ ತನ್ನದೇ ಆದ ಘನತೆ,ಗೌರವವಿದೆ.ಹತ್ತಿಯ ಬಟ್ಟೆಯಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಮಾತ್ರ ಬಳಕೆ ಮಾಡಬೇಕೆಂಬ ನಿಯಮವಿದ್ದ ಕಾರಣ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ನೇಕಾರರಿಗೆ ಧ್ವಜ ನೇಯ್ಗೆ ಮಾಡಲು ಆಡರ್‍ಗಳು ಬರುತ್ತಿದ್ದವು.ಇದರಿಂದ ಸಾವಿರಾರು ನೇಕಾರರ ಕುಟುಂಬಗಳು ಜೀವನ ನಡೆಸುತ್ತಿದ್ದರು.
ಆದರೆ ಸರಕಾರ ನೈಲಾನ್ ಮತ್ತು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಭಾವುಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ನೇಕಾರರ ಕೈಯಲ್ಲಿ ಕೆಲಸವಿಲ್ಲದೆ, ಹಸಿದ ಹೊಟ್ಟೆಯಲ್ಲಿಯೇ ಜೀವನ ನಡೆಸುವಂತಾಗಿದೆ. ಸರಕಾರದ ನೀತಿ ಖಂಡನೀಯ. ಸರಕಾರ ಕೂಡಲೇ ಧ್ವಜ ಸಂಹಿತೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ದೇವಾಂಗ ಸಮಾಜದ ಅಧ್ಯಕ್ಷರಾದ ರಾಮಕೃಷ್ಣಯ್ಯ ಮಾತನಾಡಿ, 1915ರಲ್ಲಿ ಮಹಾತ್ಮಗಾಂಧಿ ಅವರು ವಿದೇಶಿ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳಿಗೆ ಕರೆ ನೀಡಿದ್ದ ಸ್ವದೇಶಿ ಚಳವಳಿಯ 100ನೇ ವರ್ಷದ ನೆನಪಿಗಾಗಿ 2015ರಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಆಗಸ್ಟ್ 07ನ್ನು ನೇಕಾರರ ದಿನವಾಗಿ ಘೋಷಿಸಿದ್ದರು.
ಆದರೆ ಕಳೆದ ಎರಡು ವರ್ಷಗಳ ಕಾಲ ಕೋರೋನದಿಂದ ಕೆಲಸವಿಲ್ಲದೆ ಅರ್ಥಿಕ ಸಂಕಷ್ಟ ಅನುಭವಿಸುತಿದ್ದ ನೇಕಾರರ ಮೇಲೆ ಧ್ವಜ ಸಂಹಿತೆ ತಿದ್ದುಪಡಿ, ಸಮುದಾಯದ ಮತ್ತಷ್ಟು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದರು.

(Visited 1 times, 1 visits today)