ತುಮಕೂರು:


ಕುಳುವಾಡಿಕೆ ಜಮೀನಿನ ಹಂಚಿಕೆ ಸಂಬಂಧ ಕೇಸು ನ್ಯಾಯಾಲಯದಲ್ಲಿ ಇರುವಾಗಲೇ, ತುಮಕೂರು ತಹಶೀಲ್ದಾರರವರು, ಸರ್ವೆ ನಂ 91-92 ಜಾಗು 08ರ ಜಮೀನನ್ನು ಕೆಲವೇ ಜನರ ಹೆಸರುಗಳನ್ನು ಪಹಣಿ ಕಲಂನಲ್ಲಿ ನಮೂದು ಮಾಡಿ ಅನ್ಯಾಯ ಮಾಡಿದ್ದು, ಇವರ ವಿರುದ್ದ ಆಗಸ್ಟ್ 16 ರಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ತಾಲೂಕು ಕಸಬಾ ಹೋಬಳಿ ಸರ್ವೆ ನಂಬರ್ 08ರ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸುಮಾರು 4.18 ಗುಂಟೆ ಹಾಗೂ ಸರ್ವೆ ನಂ 91-92ರಲ್ಲಿ 30 ಗುಂಟೆ ಜಮೀನು ಕಳೆದ 50 ವರ್ಷಗಳಿಂದಲೂ ವಿವಾದದಲ್ಲಿದೆ. ಮೂಲತಃ ಈ ಭೂಮಿ ದಲಿತರಾದ ರಾಮ, ಲಕ್ಕ ಮತ್ತು ಪಠಾಣ್ ಎಂಬುವವರಿಗೆ ಮಂಜೂರಾಗಿದ್ದು,ಸುಮಾರು 50-60 ಜನರು ಈ ಕುಟುಂಬದಲ್ಲಿದ್ದಾರೆ.ಆದರೆ ಕೇವಲ ಮೂರು ಜನರ ಹೆಸರಿನ ಪಹಣಿ ಕೂರಿಸಿ ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು. ಸದರಿ ವಿಚಾರವನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರುಗಳಿಗೆ ಲಿಖಿತವಾಗಿ ದೂರು ನೀಡಲಾಗಿದೆ.
ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿಯೂ ಸಹ ಚರ್ಚೆ ನಡೆಸಲಾಗಿದೆ.ಇಷ್ಟಿದ್ದರೂ ತುಮಕೂರು ತಾಲೂಕು ತಹಶೀಲ್ದಾರರು ಏಕಾಎಕಿ ಕುಟುಂಬದ ಸದಸ್ಯರಲ್ಲಿ ಹಲವರನ್ನು ಕೈಬಿಟ್ಟು, ಕೆಲವರ ಹೆಸರನ್ನು ಮಾತ್ರ ಪಹಣಿ ಕಲಂ ನಲ್ಲಿ ಕೂರಿಸಿ, ದಲಿತರ ಜಮೀನಿಗೆ ಸಂಚಕಾರ ತರಲು ಹೊರಟಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ, ಕೆಲವರನ್ನು ಮಾತ್ರ ಪಹಣಿ ಕಲಂನಲ್ಲಿ ಕೂರಿಸಿರುವ ತಹಶೀಲ್ದಾರ್ ಮೋಹನ್ ಕುಮಾರ್ ವಿರುದ್ದ ಶಿಸ್ತು ಕ್ರಮ ಕೈಗೊಂಡು, ಅವರನ್ನು ಸೇವೆಯಿಂದ ವಜಾ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ.
ಈ ನಿಟ್ಟಿನಲ್ಲಿ ಆಗಸ್ಟ್ 16 ರಿಂದ ನಿರಂತರವಾಗಿ ಹೋರಾಟ ನಡೆಸುವುದಲ್ಲದೆ, ಸದರಿ ವಿಚಾರವನ್ನು ಲೋಕಾಯುಕ್ತ, ಕಂದಾಯ ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತಂದು ಅನ್ಯಾಯದ ವಿರುದ್ದ ಪ್ರತಿಭಟಿಸಲಾಗುವುದು ಎಂದು ಪಿ.ಎನ್.ರಾಮಯ್ಯ ನುಡಿದರು.
ತುಮಕೂರು ತಾಲೂಕು ಕಸಬಾ ಸರ್ವೆ ನಂ 08 ಮತ್ತು 91-92ರ ಜಮೀನಿಗೆ ಸಂಬಂಧಿಸಂತೆ ಈ ಹಿಂದೆ ಇದ್ದ ತಹಶೀಲ್ದಾರ ಗೋಪಾಲಯ್ಯ ಮತ್ತು ಯೋಗಾನಂದ ಕುಮಾರ್ ಅವರುಗಳು ಮಾಡಿರುವ ಏಕಪಕ್ಷೀಯ ಆದೇಶವನ್ನು ಪ್ರಶ್ನಿಸಿ, 2020ರಲ್ಲಿಯೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಅದು ವಿಚಾರಣೆಯಲ್ಲಿದೆ.
ಕುಳುವಡಿಕೆ ಜಮೀನು ಮಂಜೂರಾದ ರಾಮ, ಲಕ್ಕ ಮತ್ತು ಪಠಾಣ್‍ದ ಎಲ್ಲಾ ಸದಸ್ಯರನ್ನು ಜಮೀನಿನ ವಾರುಸುದಾರರಾಗಿ ಪರಿಗಣಿಸಬೇಕು. ಕೇವಲ ಮೂವರ ಹೆಸರಿಗೆ ಪಹಣಿ ಮಾಡಿ, ಕೋಟ್ಯಾಂತರ ರೂ ಭೂಮಿಯನ್ನು ಒಡೆಯಲು ತಹಶೀಲ್ದಾರ್ ಹುನ್ನಾರ ನಡೆಸಿದ್ದಾರೆ.
ಹಾಗಾಗಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಪಿ.ಎನ್.ರಾಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಏ.ನಾಗೇಶ್, ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 5 times, 1 visits today)