ತುಮಕೂರು:
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಾತ್ಮಗಾಂಧಿ ಸ್ಮಾರಕ ಭವನ ಇಂದು ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಬೇಸರದ ಸಂಗತಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಾತ್ಮಗಾಂಧಿ ಸ್ಮಾರಕ ಭವನಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, 1932 ಮತ್ತು 1937 ರಲ್ಲಿ ಗಾಂಧೀಜಿಯವರು ತುಮಕೂರಿಗೆ ಎರಡು ಭಾರಿ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಕೊಠಡಿಯೊಂದರಲ್ಲಿ ತಂಗಿರುತ್ತಾರೆ. ಇದು ಇಂದು ಬಹಳ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿಜಿಯ ಸ್ಮಾರಕವಾಗಿರುವ ಇದನ್ನು ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರ ಇದಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕು, ಇಲ್ಲವೇ ಕಾರ್ಪೊರೇಷನ್‍ನವರಿಗೆ ಸೂಚನೆ ಕೊಟ್ಟು ಅವರ ಮುಖಾಂತರವಾದರೂ ಅಭಿವೃದ್ಧಿಪಡಿಸಬೇಕು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಇಂತಹ ಸ್ಮಾರಕಗಳು ನಮಗೆ ಸಿಗುವುದೇ ಅಪರೂಪ. ಗಾಂಧಿಜಿಯವರ ನಡಿಗೆ, ಅವರು ಬಂದಂತಹ ಜಾಗ, ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದ ಅಂದಿನ ಕಾಂಗ್ರೆಸ್ ಮುಖಂಡರುಗಳ ಜೊತೆ ಸಭೆ ಮಾಡಿದ್ದಾರೆ. ಹಾಗಾಗಿ ಇದು ಬಹಳ ಪ್ರಾಮುಖ್ಯ ಎಂದು ನನಗನಿಸುತ್ತದೆ. ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು. ಮುಂದಿನ ದಿನಗಳಲ್ಲಿ ಇದನ್ನು ಉಳಿಸಿಕೊಂಡರೆ ಮುಂದೆ ಬರುವ ಪೀಳಿಗೆಗೆ ಹಾಗೂ ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಗಾಂಧೀಜಿ ಉಳಿದುಕೊಂಡಿದ್ದರಂತೆ ಎಂದು ಹೇಳುವುದೇ ದೊಡ್ಡ ಇತಿಹಾಸವಾಗಲಿದೆ ಎಂದರು.
ಮಹಾತ್ಮ ಗಾಂಧಿ ಸ್ಮಾರಕ ಭವನವನ್ನು ಅಭಿವೃದ್ಧಿ ಪಡಿಸಿ ಗ್ರಂಥಾಲಯ, ಮತ್ತು ಅವರ ಇತಿಹಾಸವನ್ನು ತಿಳಿಸುವಂತಹ ಕಾರ್ಯ ಮಾಡಬೇಕಿದೆ. ಇಂದು ತಿರಂಗ ಯಾತ್ರೆ ಮಾಡುತ್ತಿರುವುದು ದೇಶಭಕ್ತಿಯನ್ನು ಪ್ರದರ್ಶನ ಮಾಡುವಂತಹದ್ದು, ಅದರ ಜೊತೆಗೆ ಗಾಂಧಿಜಿ ಮತ್ತು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದಂತಹ ಅನೇಕರನ್ನು ಇಂದು ನಾವು ಸ್ಮರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಮುಖಂಡರಾದ ಸಿಮೆಂಟ್ ಮಂಜುನಾಥ್, ಪ್ರಕಾಶ್, ಸೋಮಶೇಖರ್, ಮತ್ತಿತರರು ಹಾಜರಿದ್ದರು.