ತುಮಕೂರು:
ದೇಶದ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತು ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ಬಿಜಿಎಸ್ ಟೌನ್ ಹಾಲ್ ವೃತ್ತದಲ್ಲಿ ಕಾರ್ಪೊರೇಷನ್ ಪರಿಮಿತಿಯಲ್ಲಿ ಭಾನುವಾರ ಕೆನರಾ ಬ್ಯಾಂಕ್ ವತಿಯಿಂದ ನಡೆದ ವಸ್ತುಪ್ರದರ್ಶನ ಹಾಗೂ ಜೀರೋ ಬ್ಯಾಲೆನ್ಸ್ ಖಾತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯದ ಅರ್ಥ ತಿಳಿಯಬೇಕಾದರೆ ಸರ್ಕಾರ ಮತ್ತು ನಮ್ಮ ದೇಶ ಶ್ರಮಿಕರಿಗೆ, ಜನರಿಗೆ ಸೌಕರ್ಯ ಕೊಟ್ಟಾಗ ಮಾತ್ರ ಸ್ವಾತಂತ್ರ್ಯದ ಬಗ್ಗೆ ಅರಿವು ಬರುತ್ತದೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಸಾಕಷ್ಟು ಜನಪರ ಯೋಜನೆಗಳು ಜಾರಿಗೆ ತಂದಿದ್ದು, ಆ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ತಲುಪುತ್ತಿವೆ ಎಂದರೆ ಅದಕ್ಕೆ ನಾವು ಹೆಮ್ಮೆ ಪಡಬೇಕಾಗುತ್ತದೆ. ಇಂದು ಜನ್ ಧನ್ ಯೋಜನೆ, ಸಾಮಾಜಿಕ ಭದ್ರತೆ ಯೋಜನೆ, ಅಟಲ್ ಪಿಂಚಣಿ ಯೋಜನೆ, ಉಜ್ವಲ ಯೋಜನೆ, ಬೀದಿ ವ್ಯಾಪಾರ ಮಾಡುವವರಿಗೆ ಸ್ವನಿಧಿ ಯೋಜನೆ ಮುಂತಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಉದ್ಧೇಶ ಪ್ರಧಾನಿಯವರದ್ದಾಗಿದೆ ಎಂದು ಹೇಳಿದರು.
ಟೀ ಮಾರುತ್ತಿದ್ದಂತಹ ವ್ಯಕ್ತಿ ಇಂದು ದೇಶದ ಚುಕ್ಕಾಣಿ ಹಿಡಿದಿದ್ದಾರೆ ಎಂದರೆ ದೇಶದ ಪ್ರತಿಯೊಬ್ಬ ಶ್ರಮಿಕರ ಬಡವರ ಕಷ್ಟವನ್ನು ಅರಿತಿದ್ದಾರೆ. ಜನರ ಕಷ್ಟಗಳನ್ನು ಅರಿತ ಅವರು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಲು ವಾತಾವರಣ ಸೃಷ್ಠಿಮಾಡುತ್ತಿದ್ದಾರೆ. ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ.
ದೇಶಕ್ಕಾಗಿ ಅನೇಕರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ, ಅದರಲ್ಲಿ ಸುಭಾಷ್ ಚಂದ್ರಬೋಸ್, ಮಹಾತ್ಮಗಾಂಧಿ, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದವರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ನಾವು 75 ವರ್ಷ ಮುಗಿಸಿ 76ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಮಾತನಾಡಿ, ಇಂದು ಕೆನರಾ ಬ್ಯಾಂಕ್ ವತಿಯಿಂದ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ ಸಿಕ್ಕಿದಾಗಿನಿಂದ ನಡೆದಿರುವ ಘಟನೆಗಳ ಬಗ್ಗೆ ಚಿತ್ರಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅಸಂಘಟಿತ ಕಾರ್ಮಿಕ ವರ್ಗಕ್ಕೆ ಜೀರೋ ಬ್ಯಾಲೆನ್ಸ್ ಖಾತೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಆಟೋ ಚಾಲಕರು, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೆ ಕ್ಯೂ ಆರ್ ಕೋಡ್‍ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮೊಬೈಲ್ ಮೂಲಕ ತಮ್ಮ ಅಕೌಂಟನ್ನು ಚಲಾಯಿಸಬಹುದು. ಇಂದು ಸರ್ಕಾರದ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪುತ್ತಿದೆ ಎಂದರೆ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಪಡೆಯಬೇಕೆಂಬ ಉದ್ಧೇಶ ಎಂದರು.
ಮಧ್ಯವತಿಗಳಿಗೆ ಅವಕಾಶವಿಲ್ಲ, ಉಚಿತವಾಗಿ ಅಕೌಂಟ್ ಓಪೆನ್ ಮಾಡಿಕೊಡಲಾಗುತ್ತದೆ. ಜೊತೆಗೆ ಕ್ಯೂ ಆರ್ ಕೋಡ್‍ಗಳನ್ನೂ ಸಹ ನೀಡಲಾಗುತ್ತಿದೆ ಇದರ ಪ್ರಯೋಜನವನ್ನು ನಗರದ ನಾಗರೀಕರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಯೋಧ ನಂಜುಂಡಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ರೇಣುಕ, ಕೊಪ್ಪಳ್ ನಾಗರಾಜ್, ಆಟೋ ಯಡಿಯೂರಪ್ಪ, ಟಿ.ಆರ್. ಸದಾಶಿವಯ್ಯ, ಶಬ್ಬೀರ್ ಅಹಮದ್, ಕೋಮಲ, ಗೋಪಿ, ಕೆ.ವಿ.ಪ್ರಕಾಶ್, ರಿಯಾಜ್ ಮುಂತಾದವರು ಭಾಗವಹಿಸಿದ್ದರು.