ತುಮಕೂರು:
ಹೋರಿಮುದ್ದಪ್ಪ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಹೋರಿಮುದ್ದಪ್ಪ ಕಾಂಪೌಂಡ್‍ನಲ್ಲಿರುವ ಕನ್ನಡ ಧ್ವಜಸ್ತಂಭದ ಆವರಣದಲ್ಲಿ ಮಧ್ಯರಾತ್ರಿ 12ರ ಸಮಯದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಮಧ್ಯರಾತ್ರಿ ನಡೆದ 75ನೇ ಸ್ವಾತಂತ್ರ್ಯೋತ್ಸವದಲ್ಲಿ ಹಿರಿಯರಾದ ಗಂಗಮ್ಮ ಧ್ವಜಾರೋಹಣ ನೆರವೇರಿಸಿದರು. ಹೋರಿಮುದ್ದಪ್ಪ ನಾಗರೀಕ ಹಿತರಕ್ಷಣಾ ಸಮಿತಿ ನಿರ್ದೇಶಕ ಗುರುಮೂರ್ತಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು ಮಧ್ಯರಾತ್ರಿಯಾಗಿದ್ದು ಅದರ ಸವಿನೆನಪಿಗಾಗಿ ಇಲ್ಲೂ ಕೂಡ ಮಧ್ಯರಾತ್ರಿಯೇ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇಂದಿನ ಯುವಕರಿಗೆ ಹಿಂದಿನವರ ಮಾರ್ಗದರ್ಶನ ಅಗತ್ಯವಿದ್ದು ರಾಷ್ಟ್ರನಾಯಕರ ಅದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಮುಂದಾಗಿ ಎಂದು ಕರೆ ನೀಡಿದರು.
ಶಿಕ್ಷಕ ವಿಶ್ವನಾಥ್ ಮಾತನಾಡಿ, ಧಾರ್ಮಿಕ ಸಂಸ್ಕಾರದ ಹಿನ್ನಲೆಯಲ್ಲಿ ವೈಜ್ಞಾನಿಕ ಬೆಳವಣಿಗೆಯಾಗಬೇಕು. ಧಾರ್ಮಿಕ ಸಂಸ್ಕಾರದ ಮೂಲಕ ಸಮಾನತೆ, ಸದಾಚಾರ, ಮಾನವೀಯತೆ ಬೆಳೆಸಿಕೊಳ್ಳಿ ಎಂದು ಹೇಳಿದರು.
ಸ್ವರ ಸಿಂಚನ ಸುಗಮ ಸಂಗೀತ ಸಂಸ್ಥೆಯ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಪ್ರಸ್ತುತದಲ್ಲಿ ದೇಶವ್ಯಾಪಿ ಅನೇಕ ಜ್ವಲಂತಸಮಸ್ಯೆಗಳಿದ್ದು ಅವುಗಳ ನಿರ್ಮೂಲನೆಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇಂತಹ ಸಮಸ್ಯೆಗಳ ನಿರ್ಮೂಲನೆಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಪಣತೊಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಹೋಟೆಲ್ ಮಂಜಣ್ಣ, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಟಿ.ಎಸ್. ರೇಣುಕಾಪ್ರಸಾದ್, ಖಜಾಂಚಿ ಶಿವಾನಂದ್, ನಿರ್ದೇಶಕರುಗಳಾದ ಮಹೇಶ್, ಗುರುಮೂರ್ತಿ, ದರ್ಶನ್, ಚರಣ್, ಪ್ರೇಮ, ಹೇಮ, ಸಾವಿತ್ರಮ್ಮ, ಶಶಿ, ಶಾಂತಕುಮಾರ್, ಪವಿತ್ರ, ಮಂಜುನಾಥ್, ವಿಶ್ವನಾಥ್ ಮುಂತಾದವರು ಭಾಗವಹಿಸಿದ್ದರು.