ತುಮಕೂರು:
ಲಂಚ ಕೊಟ್ಟರೆ ನೌಕರಿ, ಮಂಚ ಏರಿದರೆ ಅಧಿಕಾರ ಎಂದು ಹೇಳಿ ಮಹಿಳೆಯರಿಗೆ ಅವಮಾನ ಮಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಜಿಲ್ಲಾ ಮಹಿಳಾ ಸಮನ್ವಯ ಸಮಿತಿ ಸದಸ್ಯೆಯರು ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅಸಭ್ಯ ಹೇಳಿಕೆ ನೀಡಿ ಮಹಿಳಾ ಕುಲಕ್ಕೆ ಅವಮಾನ ಮಾಡಿರುವ ಶಾಸಕ ಖರ್ಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಉದ್ಯೋಗಕ್ಕೆ ಹೋಗುವ ಎಲ್ಲಾ ಹೆಣ್ಣು ಮಕ್ಕಳು ಈ ರೀತಿ ನಡೆದುಕೊಳ್ಳುತ್ತಾರೆಯೇ, ಈ ಹೇಳಿಕೆಯನ್ನು ಕುಟುಂಬದವರು ಗಂಭೀರವಾಗಿ ಪರಿಗಣಿಸಿದರೆ ಅವರನ್ನು ಉದ್ಯೋಗಕ್ಕೆ ಕಳಿಸುತ್ತಾರೆಯೆ? ಪ್ರಿಯಾಂಕ್ ಖರ್ಗೆ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಹೀಗೇ ನಡೆಸಿಕೊಳ್ಳುತ್ತಾರೆಯೆ? ಖರ್ಗೆ ಹೇಳಿಕೆ ಅವರ ಹಾಗೂ ಕಾಂಗ್ರೆಸ್ ಪಕ್ಷ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ. ಇವರು ಕೂಡಲೇ ಮಹಿಳೆಯರ ಕ್ಷಮೆ ಕೇಳಬೇಕು. ಕಾಂಗ್ರೆಸ್ ಪಕ್ಷ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕಿ ರೂಪ ಮಾತನಾಡಿ, ಮಹಿಳೆಯರನ್ನು ಈ ರೀತಿ ಕೀಳಾಗಿ ಕಾಣುವುದು ಕಾಂಗ್ರೆಸ್ ಪಕ್ಷದ ಸಂಸ್ಕøತಿ, ಆ ಪಕ್ಷದ ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಕೆಟ್ಟ ಸಂಸ್ಕøತಿ ಪ್ರದರ್ಶಿಸಿದ್ದಾರೆ. ಈ ವರ್ತನೆಯನ್ನು ಎಲ್ಲಾ ಮಹಿಳೆಯರು ಖಂಡಿಸಬೇಕು. ಇವರು ಕ್ಷಮೆ ಕೇಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಸದರಿ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಾಗರತ್ನಮ್ಮ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಸೌಮ್ಯ ಜಿ.ಎಲ್, ಪ್ರಧಾನ ಕಾರ್ಯದರ್ಶಿ, ಓಬಿಸಿ ಮೋರ್ಚಾ ಉಪಾಧ್ಯಕ್ಷೆ ಮಂಜುಳ ರಾಮ್, ದಾವಣಗೆರೆ ವಿಭಾಗ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಟದ ಸಹ ಸಂಚಾಲಕಿ ಎಂ.ಪಿ.ಜ್ಯೋತಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಜಾಹ್ನವಿ, ಕಾವ್ಯ, ಮಂಜುಳ ಆದರ್ಶ ನಗರ ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್ ಬಾಬು, ಮಂಜುಳಾ ಆದರ್ಶ್, ನವೀನಾ ಅರುಣ್, ಪ್ರಮುಖರಾದ ವಾಸವಿ ಗುಪ್ತ, ರೇಖಾ ಶಿವಕುಮಾರ್ ಇನ್ನು ಮುಂತಾದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.