ತುಮಕೂರು:
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಯುಂಟಾಗಿರುವ ಹೇಮಾವತಿ ನಾಲೆ, ಕೆರೆ ಕೋಡಿಗಳ ಪ್ರದೇಶಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಗುಬ್ಬಿಗೇಟ್ ಸಮೀಪ ಹಾದು ಹೋಗಿರುವ ಹೇಮಾವತಿ ನಾಲೆ ಮಳೆಯಿಂದ ಹಾನಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ಸಚಿವ ಕಾರಜೋಳ ಅವರು ಅಧಿಕಾರಿಗಳೊಂದಿಗೆ ತೆರಳಿ ಹಾನಿ ಉಂಟಾಗಿರುವ ಹೇಮಾವತಿ ನಾಲೆಯನ್ನು ವೀಕ್ಷಿಸಿದರು.
ಹೇಮಾವತಿ ನಾಲೆ ಪರಿಶೀಲಿಸಿದ ನಂತರ ಮಲ್ಲಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಗ್ರಾಮದ ಸಿದ್ದಿವಿನಾಯಕ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಭಾರೀ ಮಳೆಯಿಂದ ಹಾನಿಗೆ ಒಳಗಾಗಿರುವ ಕೆರೆಯ ಕೋಡಿ ದುರಸ್ಥಿಗೊಳಿಸುವುದಾಗಿ ಭರವಸೆ ನೀಡಿದರು. ನಂತರ ಅಡಗೂರು ಕೆರೆಗೆ ತೆರಳಿದ ಸಚಿವರು ಅಲ್ಲೂ ಸಹ ಕೆರೆ ಕೋಡಿ ಮಳೆಯಿಂದ ಹಾಳಾಗಿರುವುದನ್ನು ವೀಕ್ಷಿಸಿ, ಸರ್ಕಾರದಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಕೋಡಿ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಗುಬ್ಬಿ ತಾಲ್ಲೂಕು ನಿಟ್ಟೂರು-ಚೇಳೂರು ಮಧ್ಯೆ ಇರುವ ಇಡಕನಹಳ್ಳಿ ಸಮೀಪ ಮಳೆಯಿಂದಾಗಿ ಹೇಮಾವತಿ ನಾಲೆ ಕುಸಿದಿದ್ದು, ಈ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಹೇಮಾವತಿ ನಾಲೆ ಕುಸಿದಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ, ತಕ್ಷಣ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಹೇಮಾವತಿ ನಾಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು, ಮಳೆಯಿಂದಾಗಿ ಹೇಮಾವತಿ ನಾಲೆಯ ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳ ಮಣ್ಣು ಕುಸಿತ ಮತ್ತು ತಡೆಗೋಡೆಗಳ ಕುಸಿತವಾಗಿದೆ. ಅನೇಕ ಸೇತುವೆಗಳು ಒಡೆದು ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದರು.
ಹೇಮಾವತಿ ತುಮಕೂರು ಬ್ರಾಂಚ್ ಕೆನಾಲ್ -97 ರಲ್ಲಿ ನಾಲೆಯ ಒಳ ಭಾಗ ಕುಸಿದು ಮಣ್ಣು ನಾಲೆ ಒಳಗೆ ಬೀಳುತ್ತಿದೆ. ಇದರಿಂದಾಗಿ 195 ಕಿ.ಮೀ. ದೂರದವರೆಗೂ ನೀರು ಹರಿದು ಹೋಗಲು ತೊಂದರೆಯಾಗುತ್ತಿದೆ. ಈ ಭೂ ಕುಸಿತದಿಂದ ನಾಲೆ ಮುಚ್ಚಿ ಹೋಗುತ್ತಿದೆ. ಕೂಡಲೇ ಇದನ್ನು ದುರಸ್ಥಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ದುರಸ್ಥಿ ಕಾಮಗಾರಿಗೆ ಸುಮಾರು 25 ಕೋಟಿ ರೂ. ಖರ್ಚಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕೂಡಲೇ ಡಿಪಿಆರ್ ಸಿದ್ದಪಡಿಸಿ ಅನುಮೋದನೆ ಪಡೆದು ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ ಎಂದರು.
ಜು 31 ರಿಂದೀಚೆಗೆ ಮಳೆಯಿಂದಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಇಲಾಖೆಗೆ ಹಾನಿಯುಂಟಾಗಿದ್ದು, ಸುಮಾರು 65 ಕಾಮಗಾರಿಗಳನ್ನು 50 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದರು. ಆದಷ್ಟು ಬೇಗ ಕೆರೆಕಟ್ಟೆಗಳ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ತುಮಕೂರು ಶಾಖಾ ನಾಲೆ 228.ಕಿ.ಮೀ ಇದ್ದು, ಈ ಪೈಕಿ ನಾಲೆಗಳ ಕ್ಷಮತೆಯನ್ನು ಹೆಚ್ಚಿಸಲು ಹಾಗೂ ನೀರು ಸೋರುವಿಕೆಯನ್ನು ತಡೆಗಟ್ಟಲು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ವೈ ನಾಲೆ ಕಿ.ಮೀ 15,727 ರಿಂದ ಕಿ.ಮೀ. 2175 ಮತ್ತು ತುಮಕೂರು ಶಾಖಾ ನಾಲೆ ಒಟ್ಟು 228 ಕಿ.ಮೀ. ಉದ್ದದ ನಾಲೆಯ ಪೈಕಿ, 166,90 ಕಿ.ಮೀ ಉದ್ದದ ನಾಲಾ ಆಧುನೀಕರಣವನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ 61.10 ಕಿ.ಮೀ ಉದ್ದ ಆಧುನೀಕರಣ ಕಾಮಗಾರಿಯನ್ನು ಆದ್ಯತೆಯನುಸಾರ ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು. ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಹಸ್ತಾಂತರಗೊಂಡಿರುವ 201 ಸಣ್ಣ ನೀರಾವರಿ ಕೆರೆಗಳಿದ್ದು, ಒಟ್ಟಾರೆ 38,016,33 ಎಕರೆ ಅಚ್ಚುಕಟ್ಟು ಪ್ರದೇಶ ಮತ್ತು 7.139 ಟಿ.ಎಂ.ಸಿ ನೀರಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಒಟ್ಟಾರೆ 43 ಕೆರೆ ತುಂಬಿಸುವ ಯೋಜನೆಗಳಡಿ 287 ಕರೆಗಳನ್ನು ತುಂಸಲು ಯೋಜಿಸಲಾಗಿದೆ. ಈಗಾಗಲೇ 33 ಯೋಜನೆಗಳನ್ನು ಪೂರ್ಣಗೊಳಿಸಿ, 156 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, 10 ಯೋಜನೆಗಳು ಪ್ರಗತಿಯಲ್ಲಿವೆ ಎಂದು ಸಚಿವರು ತಿಳಿಸಿದರು.