ತುಮಕೂರು:
ಮಳೆಹಾನಿ ಪ್ರದೇಶಗಳ ವೀಕ್ಷಣೆಗೆ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ನಂತರ ಭದ್ರಮ್ಮ ವೃತ್ತಕ್ಕೆ ತೆರಳಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ,ವಿರೋಧಪಕ್ಷದ ನಾಯಕರ ಪ್ರವಾಸದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಬಜರಂಗದಳವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್, ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಕಾನೂನು, ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದೆ.ಒಂದು ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗೆ ನಿಮಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ ಎಂದರೆ, ಇನ್ನೂ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ಸಾರ್ವಕರ್ ಅವರ ವಿಚಾರದಲ್ಲಿ ಸತ್ಯ ನುಡಿದ ಸಿದ್ದರಾಮಯ್ಯ ಅವರ ವಿರುದ್ದ ಆಡಳಿತದಲ್ಲಿರುವ ಸರಕಾರ ತನ್ನ ಪಕ್ಷದ ವಿವಿಧ ಅಂಗ ಸಂಸ್ಥೆಗಳ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡಿ, ಈ ರೀತಿಯ ದುಷ್ಕøತ್ಯ ಎಸಗುತ್ತಿದೆ. ಇದು ಯಾವುದೇ ಸರಕಾರಕ್ಕೆ ಶೋಭೆ ತರುವಂತಹ ವಿಚಾರವಲ್ಲ. ಕೂಡಲೇ ಇವುಗಳನ್ನು ಕೈಬಿಡಬೇಕು. ಕೂಡಲೇ ತಪಿತಸ್ಥರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂಬುದು ಜಿಲ್ಲಾ ಕಾಂಗ್ರೆಸ್‍ನ ಒತ್ತಾಯವಾಗಿದೆ ಎಂದು ಎಸ್.ಷಪಿ ಅಹಮದ್ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡು ಕಂಡು ಅತ್ಯಂತ ಪ್ರಬುದ್ದ ರಾಜಕಾರಣಿ, ಬಿಜೆಪಿ ಬ್ರಿಟಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ಸಾರ್ವಕರ್ ಅವರನ್ನು ಸ್ವಾತಂತ್ರ ವೀರ ಎಂದು ಬಣ್ಣಿಸಲು ಹೊರಟಿರುವುದರ ಹಿಂದಿನ ಹುನ್ನಾರವನ್ನು ಬಯಲಿಗೆಳೆದಿದ್ದರು. ಇದರಿಂದ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿ ಪಕ್ಷದ ತನ್ನ ಅಂಗ ಸಂಸ್ಥೆಗಳಾದ ಬಜರಂಗದಳ ಇನ್ನಿತರ ಸಂಘಟನೆಗಳ ಮೂಲಕ ವಿರೋಧಪಕ್ಷದ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆಯುವಂತಹ ಕುಕೃತ್ಯ ಮಾಡುತ್ತಿದೆ. ಇದಕ್ಕೆ ಸರಕಾರದ ಪರೋಕ್ಷ ಬೆಂಬಲವೂ ಇದೆ. ಹಾಗಾಗಿ ಕೂಡಲೇ ಬಜರಂಗದಳವನ್ನು ನಿಷೇಧಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಪಾಲಿಕೆಯ ಸದಸ್ಯರಾದ ನಯಾಜ್ ಅಹಮದ್, ಮಹೇಶ್, ಮಾಜಿ ಸದಸ್ಯ ಅಫೀಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆಟೋ ರಾಜು, ಮೆಹಬೂಬ್ ಪಾಷ, ಮುಖಂಡರಾದ ಜೀಯಾ, ಓಬಿಸಿ ಘಟಕದ ಪುಟ್ಟರಾಜು, ಉಪಾಧ್ಯಕ್ಷ ನರಸೀಯಪ್ಪ, ಗೀತಾ, ಎಂ.ವಿ.ರಾಘವೇಂದ್ರಸ್ವಾಮಿ, ನಾಗರಾಜು, ಅನಿಲ್, ಕೆಂಪಣ್ಣ, ಸಿಮೆಂಟ್ ಮಂಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.