ತುಮಕೂರು:
ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಬದುಕಿದಾಗ ಮಾತ್ರ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಅಂತಹ ಘನ ವ್ಯಕ್ತಿತ್ವ ಡಿ. ದೇವರಾಜ ಅರಸು ಅವರದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡಂತಹ ಮಹತ್ತರವಾದ ನಿರ್ಧಾರಗಳಲ್ಲಿ ಭೂ ಸುಧಾರಣೆ ಕಾಯ್ದೆ ಪ್ರಮುಖವಾಗಿದ್ದು, ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಭೂಮಿಯ ಹಕ್ಕನ್ನು ನೀಡಿದವರು ಎಂದರು.
ಜನ ಸಮುದಾಯಕ್ಕೆ ಅನುಕೂಲವಾಗುವಂತೆ ನೀತಿಗಳಿಗೆ ಬದಲಾವಣೆ ಮಾಡಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ವ್ಯಕ್ತಿ-ಶಕ್ತಿಯಾಗಿ ರೂಪುಗೊಂಡಿದ್ದ ಅರಸು ಅವರು ತತ್ವಸಿದ್ಧಾಂತಕ್ಕೆ ಬದ್ದರಾಗಿದ್ದರು. ಸಾಮಾನ್ಯರ ಕಷ್ಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದರೆಂದರು.
ಅರಸು ಅವರು ಕೇವಲ ಒಂದು ವರ್ಗಕ್ಕೆ ಸಿಮೀತರಾದವರಲ್ಲ. ಅವರು ಸಮಷ್ಟಿ ಅಂದರೇ ಎಲ್ಲ ವರ್ಗಕ್ಕೂ ನಾಯಕರಾದವರು. ಅರಸು ಅವರು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಷ್ಟಿಯ ಕುರಿತು ಚಿಂತನೆಯಿತ್ತು. ಸಮುದಾಯದ ತುಡಿತದ ಅವರಲ್ಲಿತ್ತೆಂದರು.
ಅಧಿಕಾರಿಗಳು ಪ್ರಮಾಣಿಕರಾಗಿರಬೇಕು.ಅಧಿಕಾರದ ಅಮಲು ಇರಬಾರದು. ಇದ್ದಲ್ಲಿ ಜನಸಾಮಾನ್ಯರ ನೋವು/ ಕಷ್ಟಗಳು ಅರ್ಥವಾಗುವುದಿಲ್ಲ. ಬದಲಿಗೆ ಹುದ್ದೆಯನ್ನು ತಲೆಯಿಂದ ತೆಗೆದು ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಬೇಕು ಎಂದರು. ಸರ್ಕಾರ ಯೋಜನೆಗಳನ್ನು ರೂಪಿಸುವುದು ಅರ್ಹ ಫಲಾನುಭವಿಗಳಿಗೆ. ಅಧಿಕಾರಿಗಳು ನಿಜವಾದ ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡುವಲ್ಲಿ ಪ್ರಾಮಾಣಿಕರಿರಬೇಕು ಎಂದು ತಿಳಿಸಿದರು.
ಡಿ.ದೇವರಾಜ ಅರಸು ಅವರ ವಿಚಾರಧಾರೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಡಾ.ಕೆ.ಜಿ ಪರಶುರಾಮ ಮಾತನಾಡಿ ಅರಸು ಅವರು ಪರಿವರ್ತನೆಯ ಹರಿಕಾರ ಎನಿಸಿಕೊಳ್ಳಲು ಅವರ ಜೀವನಾನುಭವದಲ್ಲಿ ದಮನಿತ, ದನಿಸತ್ತ, ಅನಾಥ ಸಮುದಾಯಗಳನ್ನು ಹತ್ತಿರದಿಂದ ಕಂಡಿದ್ದರು.ಅವರ ರಾಜಕೀಯ ಇಚ್ಛಾಶಕ್ತಿಯ ಪ್ರತಿಫಲವನ್ನು ನಾವಿಂದು ಅನುಭವಿಸುತ್ತಿದ್ದೆವೆ ಎಂದರು.
ಗುರಿ ಮತ್ತು ಉದ್ದೇಶಗಳನ್ನು ಸರಿಯಾದ ರೀತಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಹಿಂದುಳಿದ ವರ್ಗಗಳು ಹಿಂದುಳಿದಿವೆ ಎಂದು ವಿವರಿಸಿದ ಅವರು, ವಾರ್ಷಿಕ 10 ಸಾವಿರ ವಿದ್ಯಾರ್ಥಿಗಳು ಪದವಿಯನ್ನು ಮುಗಿಸುತ್ತಾರೆ.ಅವರಲ್ಲಿ ಕೇವಲ 2500 ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಾರೆ.ಇನ್ನುಳಿದವರು ನಾನಾ ಕಾರಣಗಳಿಂದ ಹೊರಗುಳಿಯುತ್ತಿದ್ದಾರೆ ಎಂದ ಅವರು ಸರ್ಕಾರವು ಹಿಂದುಳಿದ ವರ್ಗಗಳ ಶಿಕ್ಷಣ ಮತ್ತು ಹಾಸ್ಟೆಲ್ ಗಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಿದೆ. ಅದು ವ್ಯರ್ಥವಾಗಬಾರದು. ಶಿಕ್ಷಣವನ್ನು ಪೂರೈಸಿ ಉದ್ಯೋಗವನ್ನು ಪಡೆಯಬೇಕು ಎಂದು ತಿಳಿಸಿದರು. ಔದ್ಯೋಗಿಕರಣವೇ ಅಭ್ಯುದಯದ ಮೂಲ.ಸರ್ಕಾರವು ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಮೇಲೆ ಬಂಡವಾಳವನ್ನು ಹೂಡುತ್ತದೆ.ಅದರ ಸದುಪಯೋಗಪಡಿಸಿಕೊಂಡು ಶಿಕ್ಷಣವನ್ನು ಪೂರ್ಣಗೊಳಿಸಿ ಉದ್ಯೋಗವನ್ನು ಪಡೆಯಬೇಕು. ಆ ಮೂಲಕ ಆರ್ಥಿಕ ಸಬಲೀಕರಣ, ಸಾಮಾಜಿಕ ಸಬಲೀಕರಣ ಮತ್ತು ರಾಜಕೀಯ ಸಬಲೀಕರಣವನ್ನು ಸಾಧಿಸಬೇಕೆಂದರು.ಒಮ್ಮೆ ಬಡತನದ ಸರಪಳಿಯನ್ನು ತುಂಡರಿಸಿದರೇ ಮುಂದಿನ ತಲೆಮಾರು ಮತ್ತೆಂದು ಬಡತನವನ್ನು ಅನುಭವಿಸುವುದಿಲ್ಲ ಎಂದು ವಿವರಿಸಿದರು. ಆರ್ಥಿಕ ಸಬಲೀಕರಣಕ್ಕಾಗಿ ಉದ್ಯೋಗದ ಜೊತೆಗೆ ಅನಗತ್ಯ ವೆಚ್ಚಗಳಿಗೂ ಕಡಿವಾಣ ಹಾಕಬೇಕಲ್ಲದೇ ದುಬಾರಿ ವೆಚ್ಚ ಮಾಡುವುದರಿಂದ ಆರ್ಥಿಕ ನಷ್ಟ ಅನುಭವಿಸುವಂತಾಗಬಾರದು. ಮೂಢನಂಬಿಕೆಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳದೇ ಮನೆಯ ಎಲ್ಲ ಸದಸ್ಯರು ದುಡಿಯುವಂತಾಗಿ ತಲಾದಯಕ್ಕೆ ಕೊಡುಗೆ ನೀಡಬೇಕು ಎಂದರು.
ಅರಸು ಅವರ 8 ವರ್ಷಗಳ ಆಡಳಿತ ನೀತಿ, ತೆಗೆದುಕೊಂಡ ಕ್ರಾಂತಿಕಾರಕ ನಿರ್ಧಾರಗಳಿಂದಾಗಿ ಇಂದಿಗೂ ಅವರನ್ನು ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಿದ್ದೆವೆ.ಅವರ ದೂರದೃಷ್ಟಿ ಚಿಂತನೆಗಳನ್ನು ಸಾಧಿಸಬೇಕು.ಡಾ.ಅಂಬೇಡ್ಕರ್ ಅವರ ಆಶಯಗಳನ್ನು ಜಾರಿಗೆ ತರುವಲ್ಲಿ ಅರಸು ಪ್ರಮುಖರಾಗಿದ್ದು, ಶಿಕ್ಷಣ, ಸಂಘಟನೆ, ಹೋರಾಟ ರೂಪಿಸುವುದರ ಮೂಲಕ ರಾಜಕೀಯ ಸಬಲೀಕರಣ ಸಾಧ್ಯವಾಗಬೇಕು ಎಂದರು. ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ ಡಿ ದೇವರಾಜ ಅರಸು ಅವರ ವರ್ಚಸ್ಸು, ಅವರ ಕೊಡುಗೆಗಳು, ಜಾರಿಗೆ ತಂದ ಕಾಯ್ದೆಗಳು ಸಾರ್ವಕಾಲಿಕ. ತುಳಿತಕ್ಕೊಳಗಾದವರ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಿಕೊಟ್ಟ ಧೀಮಂತ ವ್ಯಕ್ತಿತ್ವ ಅವರದು ಎಂದರು.
ಅರಸು ಅವರ ಕುರಿತಾಗಿ ಸಚ್ಚಿದಾನಂದ ಸ್ವಾಮಿಯವರು ಸಾಕಷ್ಟು ಲೇಖನಗಳನ್ನು ಬರೆದಿದ್ದು, ಅವರ ರಾಜಕೀಯ, ವೈಯಕ್ತಿಕ ಜೀವನ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಅವರ ಶ್ರಮ ಸಾರ್ಥಕವಾದದು ಎಂದರಲ್ಲದೇ ಅರಸು ಅವರ ದೂರದೃಷ್ಟಿ ಅಗಾಧವಾದುದೆಂದರು. ಜಿಲ್ಲಾ ಮಡಿವಾಳ ಸಂಘಕ್ಕೆ ಡಿ ದೇವರಾಜ ಅರಸು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.