ತುಮಕೂರು:
ಸ್ಪೂರ್ತಿ ಡೆವಲ್ಪರ್ಸ್‍ನ ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್.ಪಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್,ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂ ಅವರು ಹೇಳಿರುವಂತೆ ದೊಡ್ಡ ಕನಸುಗಳನ್ನು ಕಾಣಬೇಕು.ನಮ್ಮ ಮುಂದೆ ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿದ್ದು,ಕೀಳಿರಿಮೆ ಬಿಟ್ಟು, ಅಗತ್ಯವಾದ ಮಾರ್ಗದರ್ಶನ ಮತ್ತು ಸತತ ಪರಿಶ್ರಮದಿಂದ ಜಯಗಳಿಸದರೆ, ಭವಿಷ್ಯವೇ ನಿಮ್ಮದಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮೇಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪೂರ್ತಿ ಡೆವಲ್ಪರ್ಸ್‍ನ ಎಸ್.ಪಿ.ಚಿದಾನಂದ ಮಾತನಾಡಿ,ಒಂದು ಕಾಲದಲ್ಲಿ ನಾನು ಕೂಡ ಓದು, ಬರಹಕ್ಕೆ ದುಡ್ಡು ಹೊಂದಿಸಲಾಗದ ಸ್ಥಿತಿಯಿಂದ ಕಷ್ಟಪಟ್ಟು ಇಂದಿನ ಸ್ಥಿತಿಗೆ ಬಂದಿದ್ದೇನೆ. ಯಾವುದೇ ಕ್ಷೇತ್ರವಾಗಲಿ, ನಿರಂತರ ಪರಿಶ್ರಮ ಮತ್ತು ಒಳ್ಳೆಯ ದಾರಿಯಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನನ್ನ ಜೀವನವೇ ಉದಾಹರಣೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಅತಿ ಅಗತ್ಯವಾಗಿದೆ. ಹಾಗಾಗಿ ಕನ್ನಡದ ಜೊತೆಗೆ,ಇಂಗ್ಲಿಷ್ ಭಾಷೆಯ ಕಲಿಕೆಗೆ ಎಲ್ಲರೂ ಒತ್ತು ನೀಡಿ,ಚಿಕ್ಕವರಿರುವಾಗಲೇ ಉತ್ತಮ ಗುರಿಯನ್ನು ತಲುಪುವ ದಾರಿಯನ್ನು ಕಂಡುಕೊಂಡು ಮುನ್ನೆಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉದ್ಯಮಿ ಆರ್.ಎಲ್.ರಮೇಶ್‍ಬಾಬು ಮಾತನಾಡಿ,ವಿದ್ಯಾರ್ಥಿಗಳ ಜೀವನ ಒಂದು ಒಳ್ಳೆಯ ಹಂತ. ಈ ಸಂದರ್ಭದಲ್ಲಿ ಯಾವುದೇ ವಿಚಾರದಲ್ಲಿ ನಿರ್ಲಕ್ಷ ಸಲ್ಲದು, ಹಿರಿಯರು ಹೇಳಿರುವಂತೆ ಮಕ್ಕಳು ಭತ್ತ ತುಂಬುವ ಚೀಲಗಳಾಗದೆ, ಭತ್ತ ಬೆಳೆಯುವ ಗದ್ದೆಗಳಾಗಬೇಕು.ತಂದೆ, ತಾಯಿಗಳ, ಗುರು ಹಿರಿಯರ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿ, ನಾಡಿಗೆ ಹೆಸರು ತರಬೇಕೆಂದು ಸಲಹೆ ನೀಡಿದರು.
ಶ್ರೀಮತಿ ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿಗಳಾದ ವೈ.ಎನ್.ಹೊಸಕೋಟೆ ನಟರಾಜು ಮಾತನಾಡಿ,ಸುಶಿಕ್ಷಿತರನ್ನು ಎಲ್ಲರೂ ಗೌರವಿಸುವಂತಹ ಕಾಲ.ಅಂಬೇಡ್ಕರ್ ಅವರಿಗೆ ಇಂದು ಪ್ರಪಂಚದಾದ್ಯಂತ ಗೌರವ, ಆಧರಗಳು ದೊರೆಯುತ್ತಿದ್ದರೆ,ಅದಕ್ಕೆ ಅವರು ಗಳಿಸಿದ ವಿದ್ವತ್ತೇ ಕಾರಣ. ಅವರನ್ನು ನೀವು ಮಾದರಿಯಾಗಿ ತೆಗೆದುಕೊಂಡು, ಉನ್ನತ ವ್ಯಾಸಂಗ ಮಾಡಿ ಯಶಸ್ಸು ಗಳಿಸಬೇಕು ಎಂದರು.
ಶ್ರೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ಟಿ.ಜಗದೀಶ್ ಮಾತನಾಡಿ, ಶಿಕ್ಷಣ ಎಂಬುದು ಇಂದು ಬಡವರು, ಮಧ್ಯಮ ವರ್ಗದವರಿಗೆ ಕೈಗೆಟುಕಲಾರದ ಸ್ಥಿತಿಯಲ್ಲಿದೆ.ಹಾಗಾಗಿ ಗ್ರಾಮೀಣ ಮತ್ತು ಬಡವರ ಮಕ್ಕಳು ಹೆಚ್ಚಿನ ರೀತಿಯಲ್ಲಿ ಸರಕಾರದ ಸೌಲಭ್ಯಗಳ ಜೊತೆಗೆ,ಸಂಘ ಸಂಸ್ಥೆಗಳು ಸಹಕಾರ ನೀಡುತಿದ್ದು, ಇವುಗಳ ಸದುಪಯೋಗ ಪಡೆದುಕೊಂಡು, ತಮ್ಮ ಶೈಕ್ಷಣಿಕ ಪ್ರಗತಿಯನ್ನು ಹೊಂದುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಅಮ್ಮನಘಟ್ಟ ಮುಖಂಡರಾದ ಮಹದೇವಯ್ಯ, ಶ್ರೀಮತಿ ಸುಧಾ, ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್, ಶ್ರೀಮತಿ ನಳಿನ, ರಾಮಚಂದ್ರರಾವ್, ದೇವರಾಜು ಮತ್ತಿತರರು ಉಪಸ್ಥಿತರಿದ್ದರು.2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 51 ಮಕ್ಕಳಿಗೆ ನೆನಪಿನ ಕಾಣಿಕೆ ಜೊತೆಗೆ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.