ತುಮಕೂರು :
ಇಂದು ಬೆಳೆಗಿನಜಾವ ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸ್ಗೂರು ಮೂಲದ 9 ಜನರ ದುರ್ಮರಣ ಸಂಭವಿಸಿರುವ ಘಟನೆ ಕುರಿತು ತೀವ್ರ ಆತಂಕ ಹಾಗೂ ಸಂತಾಪವನ್ನು ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರು ಕೂಡಲೇ ಸಾವನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಬೇಕು ಮತ್ತು ಸಾವನಪ್ಪಿದ ಪ್ರತಿ ಕುಟುಂಬಕ್ಕೆ ರೂ 25ಲಕ್ಷ ಪರಿಹಾರವನ್ನ ಸರ್ಕಾರ ಮತ್ತು ಕಲ್ಯಾಣ ಮಂಡಳಿಯಿಂದ ಘೋಷಿಸಬೇಕು ಮತ್ತು ಗಾಯಾಳುಗಳಿಗೂ ಸೂಕ್ತ ಪರಿಹಾರ ಹಾಗೂ ಸಂಪೂರ್ಣ ಚಿಕಿತ್ಸಾವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಎಂದು ಆಗ್ರಹಿಸಿದೆ.
ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ, ಮತ್ತು ಸಿಂಧನೂರಿನಿಂದ ವಾಹನದಲ್ಲಿ 20 ಜನರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ದುಡಿಯಲು ಹೊರಟಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ಮಹಿಳೆಯರು, ನಾಲ್ಕು ಜನ ಪುರುಷರು ಹಾಗೂ ಇಬ್ಬರು ಮಕ್ಕಳು ಸಾವನಪ್ಪಿದ್ದು ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಬಡವರು ಪ್ರತಿ ವರ್ಷ ಬೆಂಗಳೂರು ಮಹಾನಗರಕ್ಕೆ ನಿರ್ಮಾಣ ಕೆಲಸಗಳಿಗೆ ವಲಸೆ ಬರುತ್ತಿರುವುದು ನಡೆದೇ ಇದೆ. ಈ ಜಿಲ್ಲೆಗಳ ಅಭಿವೃದ್ದಿ ಹೆಸರಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ಸರಕಾರದ ಹಣವು ನೀರಿನಂತೆ ಹರಿಯುತ್ತಿದ್ದರೂ ಅದು ಅಭಿವೃದ್ದಿ ಮತ್ತು ಬಡವರಿಗೆ ಉದ್ಯೋಗಕ್ಕೆ ಮತ್ತು ಅವರ ಬದುಕಿನ ಉನ್ನತಿಗೆ ಬಳಕೆಯಾಗದೇ ಭ್ರಷ್ಟಾಚಾರದ ಮೂಲಕ ರಾಜಕಾರಣಿಗಳು,ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮನೆಯ ಬೊಕ್ಕಸತುಂಬುತ್ತಿರುವುದು ವಾಸ್ತವ. ಹೀಗಾಗಿ ಇಂತಹ ವಲಸೆ ಕಾರ್ಮಿಕರು ಹಾಗೂ ಅಮಾಯಕರ ಸಾವಿಗೆ ಈ ಭಾಗದ ಜನಪ್ರತಿನಿಧಿಗಳು,ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆ. ದುಡಿಯುವ ಕೈಗಳಿಗೆ ಕೆಲಸ, ಹೊಟ್ಟೆಗೆ ಹಿಟ್ಟನ್ನು ಕೊಡದ ಈ ಜನವಿರೋಧಿ, ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಪ್ರತಿದಿನವೂ ಒಂದಲ್ಲ ಒಂದು ರೂಪದಲ್ಲಿ ಬಡವರ
ಸಾವಿಗೆ ಕಾರಣವಾಗುತ್ತಿದ್ದಾರೆ ಎನ್ನುವುದಕ್ಕೆ ಇಂತಹ ಘಟನೆಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ.
ಜನರು ವಾಸಿಸುವ ತಾಲೂಕು ಜಿಲ್ಲೆಗಳಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಡಿಸಿದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರೆ ಜನರು ವಲಸೆ ಬಂದು ಈ ರೀತಿ ಭೀಕರ ಸಾವಿಗೀಡಾಗುವ ಸಂಭವ ಇರುತ್ತಿರಲಿಲ್ಲ. ಆದರೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಹೆಸರಲ್ಲಿ ಕೆಲವೆ ಜನರು ಕಲ್ಯಾಣಗೊಂಡು ಲಕ್ಷಾಂತರ ಜನರ ಬದುಕು ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಿರುವುದು
ಕಳೆದ 75 ವರ್ಷಗಳಿಂದ ನಡದೆ ಇದೆ. ಇಂತಹ ತಾರತಮ್ಯ ದ ವಿರುದ್ದ ಎಲ್ಲ ಜನಪರ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕಿದೆ.ಇಂತಹ ಚಳವಳಿಯಲ್ಲಿ ಸಕ್ರಿಯವಾಗಿ ಸಿಐಟಿಯು ನೇತೃತ್ವದ ಎಲ್ಲ ಜನಪರ ಸಂಘಟನೆಗಳು ಸಕ್ರಿಯವಾಗಿ ಭಾಗಿಯಾಗಲಿವೆ. ಇಂದು ಪ್ರಭುತ್ವದ ವೈಫಲ್ಯದಿಂದ ಉಂಟಾಗಿ ಸಾವನಪ್ಪಿರುವ ಕುಟುಂಬಗಳಿಗೆ ಪರಿಹಾರ ಮತ್ತು ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗವನ್ನು ನೀಡಬೇಕು ಈ ಭಾಗದ ಜನರ ಗೂಳೆ ತಪ್ಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಬೇಕು ಜೊತೆಗೆ ಅನಧಿಕೃತ ಕ್ರೂಷರ್ ಓಡಾಟಕ್ಕೆ ಮತ್ತು ಇಂತಹ ಮೀತಿಮೀರಿದ ಓವರ್‌ಲೋಡ್ ಹಾಗೂ ನಿರ್ಲಕ್ಷ್ಯದ ವಾಹನ ಓಡಿಸಲು ಕಾರಣವಾದ ಸಾರಿಗೆ ಇಲಾಖೆ ಅಧಿಕಾರಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.