ತುಮಕೂರು :
ಬಾಲ ಭವನ ಸೊಸೈಟಿ, ಬೆಂಗಳೂರು ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರುಗಳು ಸಹಭಾಗಿತ್ವದಲ್ಲಿಂದು ಗಣೇಶ ಚತುರ್ಥಿ ಅಂಗವಾಗಿ ಪರಿಸರ ಮಿತ್ರ ಗಣಪತಿ ರಚನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯದರ್ಶಿಗಳು ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ. ಎಸ್. ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವಿದ್ಯಾ ಗಣಪತಿ ಹಬ್ಬದ ಆಚರಣೆ ಮಕ್ಕಳಲ್ಲಿ ತುಂಬಾ ಸಂತೋಷ ಮತ್ತು ಆಸಕ್ತಿದಾಯಕ ಹಬ್ಬ. ಈ ಹಬ್ಬವನ್ನು ಆಚರಣೆ ಮಾಡುವಾಗ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ವಿವಿಧ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸಿ ಸಿದ್ಧಪಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಭೂಮಂಡಲದ ಇಡೀ ಜೀವರಾಶಿಗೆ ಹಾನಿಯುಂಟಾಗುತ್ತದೆ. ಆದ್ದರಿಂದ ಪರಿಸರ ಮಿತ್ರ ಗಣಪನ ಯಾವುದೇ ವಿಷಕಾರಿ ಬಣ್ಣಗಳನ್ನು ಬಳಸದೆ ತಯಾರಿಸುವುದರಿಂದ ಇಡೀ ಮಾನವ ಸಂಕುಲವನ್ನು ಅನಾರೋಗ್ಯದಿಂದ ರಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಶ್ರೀ ಗಣೇಶನ ಕುರಿತು ಕಥೆಯ ಮೂಲಕ ವಿವರವಾಗಿ ವಿವರಿಸಿದ ಅವರು, ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಗಣಪತಿ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ತಮ್ಮ ಶೈಕ್ಷಣಿಕ ಜೀವನದಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜ್ಞಾನಾರ್ಜನೆಗೆ ಸಮಯ ವಿನಿಯೋಗಿಸುವಂತೆ ತಿಳಿಸಿದರು.
ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮತೋಲಿತ ಆಹಾರ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಂಡು ತಮ್ಮ ಶೈಕ್ಷಣಿಕ ಜೀವನವನ್ನು ಪೂರ್ಣಗೊಳಿಸಿಕೊಳ್ಳುವಂತೆ ತಿಳಿಸಿದರು.
ನಂತರ ಮಾತನಾಡಿದ ಪರಿಸರ ಇಲಾಖೆಯ ಉಪ ಪರಿಸರ ಅಧಿಕಾರಿ ಪಲ್ಲವಿ ಅವರು, ಶ್ರೀ ಗಣೇಶನ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಐತಿಹಾಸಿಕ ಹಿನ್ನೆಲೆಯಿದೆ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ. ಈ ಮೂರು ಹಿನ್ನೆಲೆಗಳನ್ನು ಕಥೆಯ ಮೂಲಕ ಸವಿವರವಾಗಿ ವಿವರಿಸಿದರು ಹಾಗೂ ಪರಿಸರ ಗಣಪ ರಚನೆ ಕುರಿತು ಯಾವುದೇ ಅಪಾಯಕಾರಿ ರಾಸಾಯನಿಕಗಳನ್ನು ಬಳಸದೇ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ತಿಳಿಸಿದರು.
ಈ ರೀತಿ ಪರಿಸರ ಮಿತ್ರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರಿಂದ ಭೂಮಂಡಲದ ಮೇಲಿನ ಅನೇಕ ಜೀವರಾಶಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿ, ಶ್ರೀ ವಿದ್ಯಾಗಣಪತಿ ಎಲ್ಲ ಮಕ್ಕಳಿಗೂ ವಿದ್ಯಾ ಬುದ್ಧಿ ನೀಡಲೆಂದು ಶುಭಾಶಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾ ಅಧಿಕಾರಿಗಳಾದ ಶಿವಕುಮಾರಯ್ಯ, ಶಿಕ್ಷಣ ಇಲಾಖೆಯ ಶಿವರಾಜ್, ಬಾಲಭವನ ಕಾರ್ಯಕ್ರಮ ವ್ಯವಸ್ಥಾಪಕ ಪಿ. ಜೆ. ಚೌಡಪ್ಪ, ಕಾರ್ಯಕ್ರಮ ಸಂಯೋಜಕರಾದ ಮಮತ ಪಿ. ಸೇರಿದಂತೆ ಮಕ್ಕಳು ಹಾಗೂ ಶಿಕ್ಷಕರು ಹಾಜರಿದ್ದರು.