ಕೊರಟಗೆರೆ:
ದರ್ಪ ದೌರ್ಜನ್ಯಗಳಿಲ್ಲದ ಸ್ವಚ್ಛ ಪ್ರಾಮಾಣಿಕವಾದ ಗೌರವ ಘನತೆಯುಳ್ಳ ಸರ್ಕಾರಿ ಸೇವೆಗಳನ್ನು ಪಡೆಯುವುದು ಸ್ವಾಭಿಮಾನಿ ಕನ್ನಡಿಗರ ಹಕ್ಕು ಅದನ್ನು ಸಕಾರಗೊಳಿಸಲೆಂದೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದಾದ್ಯಂತ “ಕರುನಾಡು ಕಟ್ಟೋಣ” ಅಭಿಯಾನವನ್ನು ನಡೆಸುತ್ತಿದ್ದು ಕಳೆದ ಎರಡು ದಿನದಿಂದ ಕೊರಟಗೆರೆ ತಾಲೂಕಿನಲ್ಲಿ ರೈತರ ಮಹಿಳೆಯರ ಸಾರ್ವಜನಿಕರ,ಯುವಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಕೊರಟಗೆರೆ ಜಿಲ್ಲಾ ಪಂಚಾಯತಿ ಕ್ಷೇತ್ರಗಳು, ತಾಲ್ಲೂಕು ಪಂಚಾಯತಿ ಕ್ಷೇತ್ರಗಳು, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಒಳಗೊಂಡಂತೆ ಕ್ರಿಯಾ ಯೋಜನಾ ಸಮಿತಿ ರಚಿಸುತ್ತಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕನ್ನಡ ನಾಡಿನ ಪ್ರಣಾಳಿಕೆಗಳನ್ನು ಈ ತಾಲ್ಲೂಕಿಗೆ ಅನ್ವಯಿಸುವಂತೆ ಕಾರ್ಯಚರಣೆ ಮಾಡುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪ್ಲೆಕ್ಸ್ ರಾಜಕಾರಣ ರಾರಾಜಿಸುತ್ತಿದ್ದು, ಈ ದೇಶದ ಸುಪ್ರೀಂ ಕೋರ್ಟ್, ಹೈ ಕೋರ್ಟ್ ನೀಡಿರುವ ಅದೇಶಗಳನ್ನು ಇವರುಗಳೇ ಮುರಿಯುತ್ತಿದ್ದು , ಈ ದೇಶದ ಕಾನೂನನ್ನು ಜನಪ್ರತಿನಿಧಿಗಳು ಪಾಲಿಸಬೇಕಲ್ಲದೆ ಹಾಗೂ ಕೊರಟಗೆರೆಯನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಮತ್ತು ಕೊಳವೆ ಬಾವಿಯಿಂದ ತೆಗೆಯುವ ನೀರಿಗೆ ಮೀಟರ್ ಅಳವಡಿಸಿ ಶುಲ್ಕ ವಿಧಿಸಲು ಸಜ್ಜುಗೊಂಡಿದ್ದು, ಈ ರಾಜ್ಯದ ರೈತರ ಬದುಕನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಿದ್ದಗೊಂಡಿವೆ. ಇದನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುವುದಲ್ಲದೇ, ಈ ನಾಡಿನ ರೈತರಿಗೆ ಉಚಿತವಾಗಿ ಉನ್ನತ ದರ್ಜೆಯ12 ಗಂಟೆಯ ವಿದ್ಯುತ್ ಅನ್ನು ಹಗಲಿನಲ್ಲಿ ನೀಡುತ್ತೇವೆ ಎಂದು ಪಕ್ಷದ ಕನ್ನಡ ಪ್ರಣಾಳಿಕೆ ಮೂಲಕ ಈಗಾಗಲೇ ಘೋಷಿಸುತ್ತಿದ್ದೇವೆ ಎಂದರು.
ಕೊರಟಗೆರೆಯ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ತಾಲ್ಲೂಕು ಕಚೇರಿ ಪುರಸಭೆ ಕಂದಾಯ ಇಲಾಖೆ ಅಥವಾ ಯಾವುದೇ ಸರ್ಕಾರಿ ಇಲಾಖೆಯಲ್ಲಿ ಲಂಚ ನೀಡದೆ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರದ ಸುತ್ತೋಲೆಗಳನ್ನು ಗಾಳಿಗೆ ತೂರಿ ಸಾರ್ವಜನಿಕರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಭ್ರಷ್ಟಾಚಾರ ರಹಿತ ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ಮತ್ತಷ್ಟು ಕಾನೂನುಗಳನ್ನು ರೂಪಿಸಿ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಯುಕ್ತವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ಇನ್ನೂ ತಾಲ್ಲೂಕಿನ ರೈತರ ಪರಿಸ್ಥಿತಿ ಹದಗೆಟ್ಟಿದ್ದು ಖಾತೆಬದಲಾವಣೆ, ಖಾತೆಯಲ್ಲಿ ಹೆಸರು ಬದಲಾವಣೆ ಪೋಡಿ ಪ್ರಕರಣಗಳು ಹೇರಳವಾಗಿದ್ದು, ಪೋಡಿ ಮುಕ್ತ ಕೊರಟಗೆರೆಯಾಗಿ ಮಾಡಲು, ಕರೆದ ಕ್ಷಣ ಸರ್ವೇ ಕಾರ್ಯಮಾಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬಲಿಷ್ಟ ಕಾನೂನು ರಚಿಸಲು ಸಿದ್ದಗೊಂಡಿದೆ ಎಂದು ತಿಳಿಸಿದರು.
ಸಿದ್ಧರ ನಾಡದ ಕೊರಟಗೆರೆ ತಾಲ್ಲೂಕಿನಲ್ಲಿ ಸಿದ್ಧರ ಬೆಟ್ಟ ಸೇರಿದಂತೆ ಹಲವು ಬೆಟ್ಟಗಳಲ್ಲಿ ಅಮೂಲ್ಯವಾದ ಗಿಡಮೂಲಿಕೆಗಳು ಜಾಗತಿಕ ಮನ್ನಣೆ ಪಡೆದಿದ್ದು ಶಾಂತಿ ನೆಮ್ಮದಿ ತಂಪಾದ ಸ್ಥಳಗಳಲ್ಲಿ ಅರೋಗ್ಯ ಹಬ್ ನಿರ್ಮಿಸಿ ಇಲ್ಲಿನ ಯುವಜನರಿಗೆ ಅರೋಗ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಪುಲ ಅವಕಾಶಗಳನ್ನು ಪ್ರಕೃತಿಯೇ ನೀಡಿದ್ದು ಇಲ್ಲಿ ಐತಿಹಾಸಿಕ ಪೌರಾಣಿಕ ಸ್ಥಳಗಳ ಅಭಿವೃದ್ಧಿ ಮೂಲಕ ಇಲ್ಲಿನ ಯುವಜನರಿಗೆ ತರಬೇತಿ ಮತ್ತು ಲೈಸನ್ಸ್ ನೀಡುವುದರ ಮೂಲಕ ಉದ್ಯೋಗಗಳನ್ನು ಸೃಷ್ಟಿಸಿ ಕೊರಟಗೆರೆ ತಾಲ್ಲೂಕಿನ್ನು ಆರೋಗ್ಯದ ಹಬ್ ಆಗಿ ಜಗತ್ ಪ್ರಸಿದ್ಧಗೊಳಿಸಲಾಗುವುದು ಎಂದರು .
ಇದೇ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಮಾತನಾಡಿ ಎತ್ತಿನಹೊಳೆ ಯೋಜನೆಯು ಭ್ರಷ್ಟರ ಪಾಲಿನ ಅಕ್ಷಯ ಪಾತ್ರೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ಕೊಳಾಲ ಹೋಬಳಿಯ ಐದು ಗ್ರಾಮಗಳು ಮುಳುಗುತ್ತಿದ್ದು, ಇದೇ ತಾಲ್ಲೂಕಿನ 2797 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರವನ್ನು ವಿತರಣೆ ಮಾಡದೆ ರೈತರ ಬದುಕನ್ನು ಮೂರಬಟ್ಟೆ ಮಾಡಿದ್ದಾರೆ,ಸಾವಿರಾರು ವರ್ಷಗಳಿಂದ ತಮ್ಮ ಚಿಕ್ಕ ತುಂಡು ಭೂಮಿಗಳಲ್ಲಿ ಬದುಕುತ್ತಿದ್ದವರನ್ನು ಈ ಭ್ರಷ್ಟ ರಾಜಕಾರಣಿಗಳು ಗೂಳೆ ಹೊರಡುವಂತೆ ಮಾಡಿದ್ದಾರೆ ಇಂದು.
ಸಾವಿರಾರು ಕೋಟಿ ಹಣವನ್ನು ಕಿಕ್ ಬ್ಯಾಕ್ ಮೂಲಕ ಪಡೆಯುತ್ತಿದ್ದಾರೆ, ಒಂದು ಟಿ ಎಮ್ ಸಿ ನೀರಿಗೆ ಒಂದು ಸಾವಿರ ಕೋಟಿಯಷ್ಟು ಕಾಮಗಾರಿ ವೆಚ್ಚ ಹೆಚ್ಚಿಸಿ ಈ ಯೋಜನೆಯನ್ನು ರಾಜ್ಯದಲ್ಲೇ ಅತ್ಯಂತ ದುಬಾರಿ ಯೋಜನೆಯಾಗಿ ಮಾಡಿ ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಪಕ್ಷಗಳು ನಿರಂತರವಾದ ಕಿಕ್ ಬ್ಯಾಕ್ ಹಣವನ್ನು ಪಡೆಯಲು ರೂಪಿಸಲಾಗಿರುವ ಭ್ರಷ್ಟ ಯೋಜನೆ ಇದಾಗಿದೆ. ಯೋಜನೆ ಪ್ರಾರಂಭವಾಗಿ ೧೦ ವರ್ಷಗಳು ಕಳೆದರು ಈ ಕಾಮಗಾರಿಯ ಅರ್ಧದಷ್ಟು ಹಣವನ್ನು ಬಿಡುಗಡೆ ಮಾಡಿಲ್ಲ ಇನ್ನು ಹತ್ತು ವರ್ಷ ಕಳೆದರು ಈ ಕಾಮಗಾರಿ ಮುಗಿಯುವುದಿಲ್ಲ ಎಂದನಿಸುತ್ತದೆ. ಇದೊಂದು ಪೈಪ್ ಮೂಲಕ ಗಾಳಿ ತರುವ ಯೋಜನೆ ಆಗದೆ ನೀರು ತರುವ ಯೋಜನೆಯಾಗಲಿ ಎಂದು ಕೆ ಅರ್ ಎಸ್ ಪಕ್ಷ ಆಗ್ರಹಿಸುತ್ತದೆ ಎಂದರು
ಇದೇ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕು ಅಧ್ಯಕ್ಷ ರವಿಕುಮಾರ್ ವಿ.ಡಿ ಮತ್ತು ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ನಿಶ್ಚಲ್ ಆರಾದ್ಯ , ರಾಮಚಂದ್ರಯ್ಯ, ಹರ್ಷವರ್ದನ್ ,ಜನಾರ್ದನ್ ,ರಮೇಶ್ ,ನಂಜೇಶ್ ಮುಂತಾದ ಪದಾಧಿಕಾರಿಗಳು ಇದ್ದರು.