ತುಮಕೂರು:
ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮಳೆಯು ತೀವ್ರಗತಿಯನ್ನು ಪಡೆದುಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಆಲರ್ಟ್ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಬಹುತೇಕ ಕೆರೆಕಟ್ಟೆ ಹಾಗೂ ಇತರೆ ಜಲಕಾಯಗಳು ಭರ್ತಿಯಾಗಿರುವುದರಿಂದ ಸಾರ್ವಜನಿಕರು ಜಲಕಾಯಗಳ ಬಳಿ ತೆರಳದಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮನವಿ ಮಾಡಿರುತ್ತಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಕೆರೆ-ಕಟ್ಟೆ ಹಾಗೂ ಇತರೆ ಜಲಕಾಯಗಳು ಭರ್ತಿಯಾಗಿರುವುದರಿದ ವೀಕ್ಷಣೆಗೆಂದು ಪ್ರವಾಸಿಗರು/ಸಾರ್ವಜನಿಕರು ಹೋಗುತ್ತಿರುವುದು ಕಂಡುಬರುತ್ತಿದ್ದು, ಕೆರೆಯ ಪಕ್ಕದ ರಸ್ತೆಯನ್ನು ಬಂದ್ ಮಾಡಿ ಪರ್ಯಾಯ ರಸ್ತೆ ಮಾರ್ಗದಲ್ಲಿ ಸಂಚರಿಸುವಂತೆ ಅನುವು ಮಾಡಿಕೊಡಬೇಕು ಎಂದು ತಾಲ್ಲೂಕು ಆಡಳಿತಗಳಿಗೆ ಅವರು ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯ ನದಿ/ಕೆರೆ/ಕುಂಟೆ/ಹಳ್ಳ/ಜಲಕಾಯಗಳ ದಡದಲ್ಲಿ ಸಾರ್ವಜನಿಕರು ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ಮೈ ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆಗಳನ್ನು ಮಾಡುವುದು ಸಂಪೂರ್ಣವಾಗಿ ನಿರ್ಭಂದಿಸಬೇಕು ಎಂದರು.
ಮಳೆಯಿಂದಾಗುವ ಅವಘಡಗಳನ್ನು ಎದುರಿಸಲು ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಸೇರಿದಂತೆ ತಾಲ್ಲೂಕು ಆಡಳಿತ ಸರ್ವಸನ್ನದ್ಧರಾಗಿರಬೇಕು. ತುಂಬಿರುವ ಕೆರೆಗಳ ಸುತ್ತಮುತ್ತ ಪೊಲೀಸ್‍ರನ್ನು ನೇಮಿಸಿ ಅವಘಡಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್(ಎಬಿಹೆಚ್‍ಎ) ಕಾರ್ಡ್‍ಗಳನ್ನು ಗ್ರಾಮ ಒನ್ ಸೇರಿದಂತೆ ವಿವಿಧ ಸೇವಾ ಕೇಂದ್ರಗಳಲ್ಲಿ ಕಾರ್ಡ್‍ಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಹೆಚ್‍ಓ ಡಾ. ಮಂಜುನಾಥ್ ಅವರಿಗೆ ಸೂಚಿಸಿದರಲ್ಲದೆ, ಸೆಪ್ಟೆಂಬರ್ ಮಾಹೆಯನ್ನು ಆಭಾ(ಂಃಊಂ) ಮಾಹೆಯಾಗಿ ಘೋಷಿಸಿ ಎಲ್ಲಾ ನಾಗರೀಕರಿಗೂ ಕಾರ್ಡ್ ಒದಗಿಸಲು ಕ್ರಮವಹಿಸಬೇಕು. ಪ್ರಸ್ತುತ ನೀಡಲಾಗುತ್ತಿರುವ ಆಭಾ ಕಾರ್ಡ್‍ಗಳ ಮೂಲಕ ನಿಗಧಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುವುದರ ಜೊತೆಗೆ ರೋಗಿಗಳ ಹಿಂದಿನ ಚಿಕಿತ್ಸಾ ವಿವರಗಳನ್ನು ದಾಖಲಿಸಬಹುದಾಗಿದ್ದು, ನಾಗರೀಕರು ಸೇವೆಯನ್ನು ಪಡೆಯಲು ಕಾರ್ಡ್‍ನ್ನು ಪಡೆಯಬೇಕೆಂದು ಮನವಿ ಮಾಡಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯುಡಿಐಡಿ (ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ) ಕಾರ್ಡ್ ಜಿಲ್ಲೆಯ ವಿಶೇಷಚೇತನರಿಗೆ ಸಮರ್ಪಕವಾಗಿ ವಿತರಣೆ ಆಗಿಲ್ಲ. ಕೂಡಲೇ ವಿಕಲಚೇತನರನ್ನು ಗುರುತಿಸಿ ಅವರಿಗೆ ಅಗತ್ಯವಾದ ಯುಡಿಐಡಿ ಕಾರ್ಡ್ ನೀಡಲು ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾ ವಿಕಲಚೇತನರ ಅಧಿಕಾರಿ ಎಂ.ರಮೇಶ್ ಅವರಿಗೆ ಸೂಚಿಸಿದರು.
ಕೋವಿಡ್-19 ತಡೆಗಟ್ಟಲು ವಿವಿಧ ವಯೋಮಾನದವರಿಗಾಗಿ ನೀಡಲಾಗುತ್ತಿರುವ ಲಸಿಕಾಕರಣ ಪ್ರಗತಿಯಲ್ಲಿದ್ದು, 12-14, 15-17 ವಯೋಮಾನದ ಮಕ್ಕಳಿಗೆ ಎರಡನೇ ಡೋಸ್ ಲಸಿಕಾಕರಣ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ಸೂಚಿಸದರು.
ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸಲು ನಗರ ಸ್ಥಳಿಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ನಿಗಧಿಪಡಿಸಿರುವ ಅಳತೆಯ ನಿವೇಶನವನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಬೇಕು. ಈ ಕುರಿತು ಎಲ್ಲಾ ಸಿಡಿಪಿಓ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿವೇಶನ ಪಡೆಯಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ಮಳೆ ತೀವ್ರಗತಿ ಪಡೆದುಕೊಂಡಿದ್ದು, ತುಂಬಿರುವ ಕೆರೆಗಳ ಪಕ್ಕದ ರಸ್ತೆಯನ್ನು ಬಂದ್ ಮಾಡಿ ಪರ್ಯಾಯ ರಸ್ತೆ ಮಾರ್ಗವನ್ನು ಕಂಡುಕೊಳ್ಳಬೇಕು. ಸ್ಥಳೀಯ ಪಿಡಿಓ ಅಧಿಕಾರಿಗಳು ಇಂಜಿನಿಯರ್ ಜೊತೆ ತೆರಳಿ ಕೆರೆಯ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ ಈಚೆಗೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಜೀವಹಾನಿ, ಮನೆಹಾನಿ, ಬೆಳೆಹಾನಿ ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾಡಳಿತದಿಂದ ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಮನೆಹಾನಿಯಾಗಿದ್ದಲ್ಲಿ ಎಬಿಸಿ ಕೆಟಗೆರಿಗಳಾಗಿ ವಿಂಗಡಿಸಿ ನಿಗಧಿತ ಪೊರ್ಟಲ್‍ನಲ್ಲಿ ಭರ್ತಿಮಾಡಿ ಸಲ್ಲಿಸಬೇಕು. ಅಂತೆಯೇ ಬೆಳೆಹಾನಿಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ ಪರಿಹಾರ ಪೊರ್ಟಲ್ನಲ್ಲಿ ನಮೂದಿಸಬೇಕೆಂದರು.
ಸಭೆಯಲ್ಲಿ ಭೂಮಿ ಯೋಜನೆ ಪ್ರಗತಿ, ಪಹಣಿ ಕಾಲಂ 3/9 ಮಿಸ್ ಮ್ಯಾಚ್ ವಿಲೇವಾರಿ, ಪೈಕಿಪಹಣಿ ಒಟ್ಟುಗೂಡಿಸುವಿಕೆ, 11ಇಗೆ ಸಂಬಂಧಿಸಿದಂತೆ ಆರ್.ಟಿ.ಸಿ ತಿದ್ದುಪಡಿ ಪ್ರಕರಣಗಳು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಉಪವಿಭಾಗಾಧಿಕಾರಿ ವಿ.ಅಜಯ್, ಡಿಡಿಎಲ್‍ಆರ್ ಸುಜಯ್ ಕುಮಾರ್, ತಹಶಿಲ್ದಾರ್ ಮೋಹನ್ ಕುಮಾರ್, ಡಿಹೆಚ್‍ಓ ಡಾ. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಶ್ರೀಧರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.