ತುಮಕೂರು:
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಶೋಷಿತ ಸಮುದಾಯ ಆಳುವ ವರ್ಗವಾದಾಗ ಮಾತ್ರ.ಸಮಾನತೆ, ಸ್ವಾತಂತ್ರ, ಸಾಮಾಜಿಕ ನ್ಯಾಯ ಮತ್ತು ಸೋದರತೆಯನ್ನು ಪ್ರತಿಪಾದಿಸುವ ಭಾರತದ ಸಂವಿಧಾನಕ್ಕೆ ಭದ್ರತೆ ದೊರೆಯಲು ಸಾಧ್ಯ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಾಬಾ ಸಾಹೇಬ್ ಜೀನರಾಳ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಡ್ಡಿಹಳ್ಳಿಯಲ್ಲಿರುವ ಬುದ್ದ ಬಯಲು ವಿಹಾರಧಾಮದಲ್ಲಿ ಕರ್ನಾಟಕ ಸರಕಾರಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಸಮನ್ವಯ ಸಮಿತಿಯವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಅಂಗವಾಗಿ ಆಯೋಜಿಸಿದ್ದ ಭಾರತದ ಸಂವಿಧಾನ ಮತ್ತು ಅದರ ಮುಂದಿರುವ ಸವಾಲುಗಳು ಎಂಬ ಸಂವಾದವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟು,ಕೆಲ ದೆಶಕಗಳ ಹಿಂದೆಷ್ಟೇ ಅಕ್ಷರ ಲೋಕಕ್ಕೆ ತನ್ನನ್ನು ತೆರೆದುಕೊಂಡಿರುವ ನಿಮ್ನ ವರ್ಗಗಳು ಆಳುವ ವರ್ಗವಾದಾಗ,ಸಮಾನತೆ, ಸ್ವಾತಂತ್ರ, ಭಾತೃತ್ವ ಮತ್ತು ಸಾಮಾಜಿಕ ನ್ಯಾಯವೆಂಬ ಬುದ್ದನ ಕರುಣೆ ಮತ್ತು ಪ್ರೀತಿ ಎಂಬ ತತ್ವದಡಿಯಲ್ಲಿ ರಚಿತವಾಗಿರುವ ಭಾರತದ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿ, ದೇಶದ ಎಲ್ಲಾ ವರ್ಗದ ಜನರು ಶಾಂತಿ,ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.
ಇಂದು ನಮ್ಮ ಮುಂದೆಯೇ ಆನೇಕ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ.ದೇವಾಲಯಗಳಿಗೆ ಮುಕ್ತ ಪ್ರವೇಶವಿದ್ದರೂ ಸಂಪ್ರದಾಯದ ಹೆಸರಿನಲ್ಲಿ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಕಾನೂನು ಬಾಹಿರವಾಗಿ ನಿಷೇಧಿಸಲಾಗಿದೆ.ಇಂದಿಗೂ ಎಷ್ಟೋ ದೇವಾಲಯಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಸಂವಿಧಾನ ಬದಲಾಯಿಸುವ ಮಾತುಗಳು ಸಂವಿಧಾನದ ಅಡಿಯಲ್ಲಿಯೇ ಆಯ್ಕೆಯಾದ ಜನಪ್ರತಿನಿಧಿಗಳಿಂದ ಕೇಳಿಬರುತ್ತಿ ರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ.ಕಾಲಘಟ್ಟದ ಪರೀಕ್ಷೆಯನ್ನು ಇಂದು ಭಾರತೀಯ ಸಂವಿಧಾನ ಎದುರಿಸುತ್ತಿದೆ.ಸರಕಾರಿ ವಲಯ ಕಡಿಮೆಯಾಗಿ, ಖಾಸಗಿ ವಲಯದ ಪ್ರಮಾಣ ಹೆಚ್ಚುತ್ತಿದ್ದು,ಮೀಸಲಾತಿ ಎಂಬುದೇ ಸವಕಲು ನಾಣ್ಯವಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದ್ದು,ಈ ಬಗ್ಗೆ ಯುವಜನತೆ ಅದರಲ್ಲಿಯೂ ಸಂವಿಧಾನದ ಅಡಿಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ,ಅರ್ಥಿಕವಾಗಿ,ರಾಜಕೀಯವಾಗಿ ಮುಂದೆ ಬಂದಿರುವ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮುದಾಯಗಳ ಸಂವಿಧಾನದ ರಕ್ಷಣೆಗೆ ಬಾರದಿದ್ದರೆ ಭಾರತದ ಬಹುಸಂಖ್ಯಾತರಿಗೆ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯನ್ನು ನ್ಯಾಯಾಧೀಶರು ನೀಡಿದರು.
ಪ್ರಗತಿಪರ ಚಿಂತಕಿ ಡಾ.ಅರುಂಧತಿ ಮಾತನಾಡಿ,ಮಹಿಳೆಯರು, ದಲಿತರು, ಬಡವರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದ ಮನುಸೃತಿಯನ್ನು 1927ರಲ್ಲಿ ಸುಟ್ಟ ಡಾ.ಬಿ.ಆರ್.ಅಂಬೇಡ್ಕರ್, 1950ರಲ್ಲಿ ಎಲ್ಲರೂ ಒಪ್ಪುವಂತಹ ಸಂವಿಧಾನವನ್ನು ರಚಿಸಿ, ಸ್ವಾತಂತ್ರ ಭಾರತಕ್ಕೆ ಭದ್ರ ಅಡಿಪಾಯ ಹಾಕಿದರು. ಆದರೆ ಇತ್ತೀಚಿನ ಬೆಳವಣಿಗೆಗಳು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿವೆ.ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ದಲಿತರು, ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ಈ ಹಿಂದಿಗಿಂತಲೂ ಮೀತಿ ಮೀರಿದ್ದು,ಈ ದೇಶದ ಮೂಲನಿವಾಸಿಗಳು ಭಯದ ವಾತಾವರಣ ದಲ್ಲಿ ಬದುಕುವಂತಾಗಿರುವುದು ದುರಾದೃಷ್ಟ.ಇವುಗಳನ್ನು ಮೆಟ್ಟಿ ನಿಲ್ಲುವಂತಹ ಪ್ರಜ್ಞಾವಂತಿಕೆಯನ್ನು ಯುವಜನರು ಬೆಳೆಸಿಕೊಳ್ಳಬೇಕಿದೆ ಎಂದರು.
ಭಾರತದ ಸಂವಿಧಾನ ಮತ್ತು ಅದರ ಮುಂದಿರುವ ಸವಾಲುಗಳು ಎಂಬ ವಿಷಯ ಕುರಿತು ಮಾತನಾಡಿದ ಹೈಕೋರ್ಟಿನ ವಕೀಲರಾದ ಮಂಜುನಾಥ್,ಭಾರತದ ಸಂವಿಧಾನ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಅವರನ್ನು ಹೊರತು ಪಡಿಸಿ ಮಾತನಾಡಲು ಸಾಧ್ಯವೇ ಇಲ್ಲ. ಅಷ್ಟು ಗಟ್ಟಿ ಛಾಯೆಯನ್ನು ಮೂಡಿಸಿದ್ದಾರೆ. ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿ, ದೇಶ ಇಬ್ಬಾಗದಂತಹ ಸ್ಥಿತಿ ಬಂದಾಗ, ಆ ದೇಶಗಳು ನೋಡುವುದು ನೂರಾರು ಭಾಷೆ, ಧರ್ಮ,ಜಾತಿ,ಉಪ ಜಾತಿ ಆಚಾರ, ವಿಚಾರಗಳನ್ನು ಹೊಂದಿದ್ದರೂ ಅಭಿವೃದ್ದಿ ಪಥದತ್ತ ಸಾಗಿರುವ ಭಾರತದ ಕಡೆಗೆ.ಇದಕ್ಕೆ ಕಾರಣ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ. ಎಲ್ಲರಿಗೂ ಸಮಾನಹಕ್ಕು, ಸ್ವಾತಂತ್ರ್ಯ,ಸಹೋದರತೆಯನ್ನು ಹಂಚುವ ಭಾರತದ ಸಂವಿಧಾನ, ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿ ಹೆಸರು ಪಡೆದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಭೂವ್ಯಾಜ್ಯವನ್ನೇ ಮುಂದಿಟ್ಟುಕೊಂಡು ನ್ಯಾಯಾಲಯದ ತೀರ್ಪು ಬರುವ ಮುನ್ನವೇ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಹಾತೋರೆಯುತ್ತಿರುವುದು,ಏಕ ಧರ್ಮ,ಏಕ ಸಂಸ್ಕøತಿ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟ ಗಳು ಸಂವಿಧಾನಕ್ಕೆ ದೊಡ್ಡ ಸವಾಲಾಗಿವೆ.ಈ ಬಗ್ಗೆ ಯುವಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ವೇದಿಕೆಯ ಅಧ್ಯಕ್ಷತೆಯನ್ನು ಬುದ್ದವಿಹಾರದ ಅಧ್ಯಕ್ಷ ಹನುಮಂತರಾಯಪ್ಪ ವಹಿಸಿದ್ದರು.ಕೆ.ಪಿ.ಟಿ.ಸಿ.ಎಲ್. ಕಾರ್ಯನಿರ್ವಾಹಕ ಇಂಜಿನಿಯರ್ ಆದಿನಾರಾಯಣ್, ಎಸ್ಸಿ, ಎಸ್ಟಿ, ಸರಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು