ತುಮಕೂರು:


ನಗರದ ಹಳೆಯ ಪ್ರದೇಶವಾದ ಚಿಕ್ಕಪೇಟೆ ವೃತ್ತಕ್ಕೆ “ವಿಶ್ವಕರ್ಮ ವೃತ್ತ” ಎಂದು ನಾಮಕರಣ ಮಾಡುವ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಕೈಗೊಂಡ ನಿರ್ಧಾರಕ್ಕೆ ಚಿಕ್ಕಪೇಟೆ ನಾಗರೀಕರ ಹಿತ ಸಂರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸಿದೆ.
ಈ ಬಗ್ಗೆ ಜು. 25 ರಂದು ಪಾಲಿಕೆ ಪ್ರಕಟಿಸಿರುವ ಸಾರ್ವಜನಿಕ ಪ್ರಕಟಣೆ ಗೆ ಚಿಕ್ಕಪೇಟೆ ನಾಗರೀಕರು ಆಕ್ಷೇಪ ವ್ಯಕ್ಕಪಡಿಸಿ ತಮ್ಮ ತಕರಾರು ಪತ್ರವನ್ನು ಪಾಲಿಕೆಗೆ ಸಲ್ಲಿಸಿದ್ದಾರೆ. ತುಮಕೂರು ಪ್ರಾರಂಭವಾಗಿ ಹಳೆಯ ಕಾಲದಿಂದಲೂ ಚಿಕ್ಕಪೇಟೆಯ ಈ ವೃತ್ತಕ್ಕೆ ಚಿಕ್ಕಪೇಟೆ ವೃತ್ತ ಎಂದೇ ಪ್ರಖ್ಯಾತಿ ಹೊಂದಿದೆ. ಸಾರ್ವಜನಿಕ ಸರ್ಕಾರಿ ದಾಖಲೆಗಳಲ್ಲೂ ಸಹ ನಮೂದಾಗಿರುತ್ತದೆ. ಮುಖ್ಯವಾಗಿ ಚಿಕ್ಕಪೇಟೆ ವೃತ್ತವು ಹಳೆಯ ವ್ಯವಹಾರಿಕ ವ್ಯಾಪಾರ ಸ್ಥಳವಾಗಿದ್ದು ಇದು ಚಿಕ್ಕಪೇಟೆ ಎಂಬ ಹೆಸರಿನಿಂದ ಪ್ರಖ್ಯಾತವಾಗಿರುತ್ತದೆ.
ಈ ಚಿಕ್ಕಪೇಟೆ ವೃತ್ತವು ಮುಖ್ಯವಾಗಿ ಮಂಡಿಪೇಟೆ ಚಿಕ್ಕಪೇಟೆ ರಸ್ತೆ, ಚಿಕ್ಕಪೇಟೆ ಅಗ್ರಹಾರ ರಸ್ತೆ, ಚಿಕ್ಕಪೇಟೆ-ಆಚಾರ್ಯರ ಬೀದಿ ರಸ್ತೆ, ಚಿಕ್ಕಪೇಟೆ-ಅರಸಿಂಗರ ಬೀದಿ, ಚಿಕ್ಕಪೇಟೆ-ಗಾರ್ಡನ್ ರಸ್ತೆ, ಚಿಕ್ಕಪೇಟೆ-ಯಜಮಾನರ ಬೀದಿ ಎಂದು ಪ್ರಖ್ಯಾತ ಹೊಂದಿರುತ್ತದೆ.
ಚಿಕ್ಕಪೇಟೆ ವೃತ್ತದ ಹಾಜು-ಬಾಜುವಿನ ಲಿಂಕ್‍ರಸ್ತೆಗಳಲ್ಲಿ ಹೊಂದಿಕೊಂಡಂತೆ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಸ್ಥಾನ, ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಶ್ರೀಗಂಗಾಧರೇಶ್ವರಸ್ವಾಮಿ – ದೇವಸ್ಥಾನ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಶ್ರೀಬಸವಣ್ಣ ಸ್ವಾಮಿ ದೇವಸ್ಥಾನ, ಶ್ರೀವ್ಯಾಸರಾಜ ಮಠ, ಶ್ರೀರೇಣುಕಾಎಲ್ಲಮ್ಮ ದೇವಸ್ಥಾನ, ಶ್ರೀಗ್ರಾಮದೇವತೆ ಅಮ್ಮನವರ ದೇವಸ್ಥಾನ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಶ್ರೀ ಈಶ್ವರ ದೇವಸ್ಥಾನ ಮತ್ತು ಆರಸಿಂಗರ ಬೀದಿಯಲ್ಲಿರುವ ಕರಿಯಣ್ಣ-ಕೆಂಚಣ್ಣ ಭೂತರಾಯರಸ್ವಾಮಿ, ದೇವಸ್ಥಾನ, ಶ್ರೀಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನ, ಶ್ರೀವಾಸವಿ ದೇವಸ್ಥಾನ, ಶ್ರೀಉತ್ತರಾಧಿ ಮಠ, ಶ್ರೀರಾಘವೇಂದ್ರಸ್ವಾಮಿ ಮಠಗಳು ಹಾಗೂ ಇತರೆ ಮುಖ್ಯವಾದ ಪುರಾತನ ದೇವಸ್ಥಾನಗಳಿವೆ.
ಈ ಪ್ರದೇಶವು ಚಿಕ್ಕಪೇಟೆ ಎಂದೇ ಪ್ರಖ್ಯಾತಿ ಹೊಂದಿರುತ್ತದೆ ಆದರೆ ತುಮಕೂರು ಮಹಾನಗರಪಾಲಿಕೆ ತಮ್ಮ ಸಾರ್ವಜನಿಕ ಪ್ರಕಟಣೆ ಸಂಖ್ಯೆ ಸಿಆರ್/02/2022-23 ಪತ್ರದಲ್ಲಿ ಚಿಕ್ಕಪೇಟೆ ವೃತ್ತವನ್ನು “ವಿಶ್ವಕರ್ಮ ವೃತ್ತ ಎಂದು ಹೊಸದಾಗಿ ನಾಮಕರಣ ಮಾಡಲು ಪ್ರಕಟಣೆ ಹೊರಡಿಸಲಾಗಿದೆ.
ಸದರಿ ಚಿಕ್ಕಪೇಟೆ ವೃತ್ತವನ್ನು ಒಂದು ಜಾತಿಯ ಪ್ರದೇಶವಾಗಿ ನೋಡುವುದು ಎಷ್ಟು ಸರಿ ಎಂದು ವೇದಿಕೆ ಪತ್ರದಲ್ಲಿ ವಿವರಿಸಿದೆ.
ಚಿಕ್ಕಪೇಟೆ ವೃತ್ತಕ್ಕೆ ವಿಶ್ವಕರ್ಮ ವೃತ್ತವೆಂದು ಬದಲಾಯಿಸಿದಲ್ಲಿ ಜಾತೀಯತೆಯ ರಾಜಕಾರಣ ಪ್ರಾರಂಭವಾಗುತ್ತದೆ, ಇದು ವಿಶ್ವಕರ್ಮರನ್ನು ಓಲೈಸುವ ತಂತ್ರವಾಗಿದೆ ಎಂದು ವೇದಿಕೆ ತಿಳಿಸಿದೆ.

(Visited 1 times, 1 visits today)