ತುಮಕೂರು:

ನಗರಕ್ಕೆ ಸಮೀಪವಿರುವ ಮಂಚಕಲ್ಲುಕುಪ್ಪೆ ಗ್ರಾಮದ ಶ್ರೀಕಂಬದ ರಂಗನಾಥಸ್ವಾಮಿ ದೇವಾಲಯದ ಜಮೀನಿನನ್ನು ಕೆಲವರು ಒತ್ತುವರಿ ಮಾಡಿಕೊಂಡು ತಮ್ಮ ಸ್ವಂತ ಆಸ್ತಿಯಾಗಿಸಲು ಪ್ರಯತ್ನಿಸುತ್ತಿದ್ದು,ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಕೂಡಲೇ ಕ್ರಮ ಕೈಗೊಂಡು,ದೇವಾಲಯದ ಜಾಗ ಉಳಿಸಿಕೊಡಬೇಕೆಂದು ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಂಚಕಲ್ ಕುಪ್ಪೆ ಗ್ರಾಮದ ಶ್ರೀಕಂಬದ
ರಂಗನಾಥಸ್ವಾಮಿ ದೇವಾಲಯ ಮುಜರಾಯಿ ಇಲಾಖೆಯ ಸಿ.ದರ್ಜೆ ದೇವಾಲಯ ವಾಗಿದೆ. ವಾರ್ಷಿಕ ತಸ್ಥಿಕೆಯನ್ನು ನಿಗಧಿಪಡಿಸಲಾಗಿದೆ.ಗ್ರಾಮಸ್ಥರು ಶುಭ ಕಾರ್ಯಕ್ರಮಗಳಿಗಾಗಿ ಒಂದು ಸಮುದಾಯ ಭವನವನ್ನು ನಿರ್ಮಿಸಿಕೊಂಡಿದ್ದು, ಸದರಿ ಸಮುದಾಯಭವನವನ್ನು ದೇವಾಲಯ ಅಭಿವೃದ್ದಿ ಸಮಿತಿಯಲ್ಲಿದ್ದ ಕೆಲವರು ತಮ್ಮ ಸ್ವಂತ ಹೆಸರಿಗೆ ಮಾಡಿಕೊಂಡು, ಕಲ್ಯಾಣ ಮಂಟಪ ಮಾಡಿಕೊಂಡು ಅದರ ಆದಾಯವನ್ನು ದೇವಾಲಯ ಸಮಿತಿಗೆ ನೀಡದೆ, ಮೋಸ ಮಾಡಿಕೊಂಡು ಬರುತ್ತಿರುವುದಲ್ಲದೆ,ದೇವಾಲಯದ ಆಸ್ತಿ ಹೊಡೆಯಲು ಸಂಚು ರೂಪಿಸಿದ್ದಾರೆ ಎಂದು ಮನವಿ ಯಲ್ಲಿ ತಿಳಿಸಿದ್ದಾರೆ.
ತುಮಕೂರು ತಹಶೀಲ್ದಾರರ ಅವರು 2002ರಲ್ಲಿ ಸದರಿ ದೇವಾಲಯದ ಮತ್ತು ಅದರ ಪ್ರಾಂಗಣದಲ್ಲಿರುವ ಕಟ್ಟಡಗಳು ದೇವಾಲಯಕ್ಕೆ ಸೇರಿದ್ದು ಎಂದು ಆದೇಶ ಮಾಡಿರುತ್ತಾರೆ.ಅಲ್ಲದೆ ಆರ್.ಟಿ.ಐ.ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ 2002ರಲ್ಲಿ ಸಲ್ಲಿಸಿದ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಸಹ 2002ರಲ್ಲಿಯೇ ಸದರಿ ಕಲ್ಯಾಣ ಮಂಟಪವನ್ನು ದೇವಾಲಯದ ವಶಕ್ಕೆ ಪಡೆದುಕೊಳ್ಳುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಸರ್ವೆಗೆ ಬಂದ ಉಪ ತಹಶೀಲ್ದಾರರ ಮೇಲೆ ದೌರ್ಜನ್ಯ ಎಸಗಿ ಸರ್ವೆ ಕಾರ್ಯ ನಡೆಸದಂತೆ ಅಡ್ಡಿ ಪಡಿಸಿದ್ದು,ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಮಂಚಕಲ್‍ಕುಪ್ಪೆ ಕಂಬದ ರಂಗನಾಥಸ್ವಾಮಿ ದೇವಾಲಯದ ಕಲ್ಯಾಣ ಮಂಟಪದ ಕಬ್ಜಾ ಕುರಿತಂತೆ ದೂರುಗಳು ಇದ್ದರೂ ಸಹ ದೇವಾಲಯಕ್ಕೆ ಸೇರಿದ ಕಲ್ಯಾಣ ಮಂಟಪವನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು,ಮುಜರಾಯಿ ಸಚಿವರುಗಳಿಗೆ ದೂರು ಸಲ್ಲಿಸಿದ್ದು,ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಎಂ.ಕೆ.ರಾಜಣ್ಣ, ಎಂ.ಎ.ನವೀನ್, ನಾರಾಯಣ, ಮಂಜಣ್ಣ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)