ತುಮಕೂರು :
ಮಕ್ಕಳ ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿಗ್ರಹಿಸದೆ ಹೋದರೆ ಮುಂದೆ ಮತ್ತಷ್ಟು ಸಾಮಾಜಿಕ ಗಂಭೀರ ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯಾಚರಣೆಗೆ ಇಳಿದು ಮಕ್ಕಳ ಭಿಕ್ಷಾಟನೆಯನ್ನು ನಿಯಂತ್ರಿಸಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಧಿಕಾರಿ ವರ್ಗಕ್ಕೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಭಿಕ್ಷಾಟನೆ ತಡೆ: ಉಸ್ತುವಾರಿ ತಂಡದ ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭಿಕ್ಷಾಟನೆಯನ್ನು ತಡೆಯುವುದು ಒಂದು ಇಲಾಖೆಯ ಜವಾಬ್ದಾರಿಯಲ್ಲ. ಇದಕ್ಕೆ ಸಾಮೂಹಿಕ ಹೊಣೆಗಾರಿಕೆ ಇದೆ. ಇದನ್ನರಿತು ವಿವಿಧ ಇಲಾಖೆಗಳು ಪರಸ್ಪರ ಒಗ್ಗೂಡಿ ಕಾರ್ಯಾಚರಣೆಗೆ ಇಳಿದರೆ ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.
ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡುವ ಹಿಂದೆ ಕೆಲವರ ಪಿತೂರಿ ಇರುವುದು ಹಲವು ಪ್ರಕರಣಗಳಲ್ಲಿ ತಿಳಿದು ಬಂದಿದೆ. ಇದೊಂದು ದಂಧೆಯಾಗಿ ಬೆಳೆಯುತ್ತಿದೆ. ಶಿಕ್ಷಣ ಕಲಿತು ಸಮಾಜದಲ್ಲಿ ಗೌರವಯುತವಾಗಿ ಬಾಳಿ ಬದುಕುವ ಮಕ್ಕಳನ್ನು ಭಿಕ್ಷಾಟನೆಗೆ ದೂಡಿ ಅವರ ಬದುಕನ್ನೇ ಕಸಿಯುವ ಪ್ರವೃತ್ತಿ ಖಂಡನೀಯವಾದುದು. ಕಾನೂನಿನ ಪ್ರಕಾರವೂ ಇದು ಅಪರಾಧವಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ ಮಕ್ಕಳನ್ನು ಭಿಕ್ಷಾಟನೆಗೆ ದೂಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿವಿಧ ಕಾನೂನುಗಳು ಚಾಲ್ತಿಯಲ್ಲಿವೆ ಎಂದರು.
ಭಿಕ್ಷಾಟನೆಯಲ್ಲಿ ಒಳಗೊಂಡಿರುವ ಮಕ್ಕಳ ರಕ್ಷಣೆ ಮತ್ತು ಕಾನೂನಿನ ಆಯಾಮ ಕುರಿತು ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಕ್ಕಳನ್ನು ಭಿಕ್ಷಾಟನೆ ಹಾಗೂ ಇತರೆ ದೌರ್ಜನ್ಯಗಳಿಂದ ರಕ್ಷಿಸಲೆಂದೇ ಸಂವಿಧಾನಕ್ಕೆ ತಿದ್ದುಪಡಿ ಸೇರಿದಂತೆ ಹಲವು ವಿಶೇಷ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಭಿಕ್ಷಾಟನೆ ನಿರ್ಮೂಲನಾ ಕಾಯಿದೆ, ಭಾರತ ದಂಡ ಸಂಹಿತೆಯ ಕಲಂ 363 ಎ, 370 ಹಾಗೂ ಬಾಲ ನ್ಯಾಯ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಂಡವರ ವಿರುದ್ಧ ಕ್ರಮ ಜರುಗಿಸಲು, ಶಿಕ್ಷೆ ನೀಡಲು ಅವಕಾಶಗಳಿವೆ. ಆದರೆ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೂಡಬೇಕು ಎಂದರು.
ಜಿಲ್ಲಾ ತನಿಖಾ ಸಮಿತಿ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ ಮಕ್ಕಳ ಭಿಕ್ಷಾಟನೆ ತಡೆಗೆ ಈಗಾಗಲೇ ಎಸ್ಒಪಿ ರೂಪಿಸಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಇದರ ನಿವಾರಣೆ ಮತ್ತು ನಿರ್ವಹಣೆಗೆ ಮತ್ತಷ್ಟು ಯೋಜನೆ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಅಂಜನಪ್ಪ, ಡಿಡಿಪಿಐ ನಂಜಯ್ಯ, ರಂಗಯ್ಯ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾ ಘಟಕದ ಶಿವಣ್ಣ ವಂದಿಸಿದರು.