ತುಮಕೂರು :
ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆಯುವುದು ಹೇಗೆ ಸದಸ್ಯರ ಹಕ್ಕೋ,ಹಾಗೆಯೇ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ.ಸಾಲ ನೀಡುವುದು,ಮರುಪಾವತಿ ಎರಡು ಸಮನಾಗಿದ್ದರೆ ಮಾತ್ರ ಸಂಸ್ಥೆ ಏಳಿಗೆ ಹೊಂದಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಭಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸಾಲ ನೀಡುವುದು ಮತ್ತು ವಸೂಲಿ ಮಾಡುವ ಕೆಲಸವನ್ನು ತಳ ಸಮುದಾಯಕ್ಕೆ ಸೇರಿದ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ನಿರ್ವಹಿಸುವ ಮೂಲಕ ಉತ್ತುಂಗದತ್ತ ದಾಪುಕಾಲು ಹಾಕುತ್ತಿದೆ ಎಂದರು.
ಇಡೀ ರಾಜ್ಯಕ್ಕೆ ಹೊಲಿಕೆ ಮಾಡಿದರೆ ತುಮಕೂರು ಜಿಲ್ಲೆಯಲ್ಲಿ ತಳಸಮುದಾಯಕ್ಕೆ ಸೇರಿದ ಸಹಕಾರಿ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ತಮ್ಮ ಸಮುದಾಯದ ಮತ್ತು ಸಮಾಜದ ಅರ್ಥಿಕ ಚಟುವಟಿಕೆಯಲ್ಲಿ ಮುಖ್ಯ ಪಾತ್ರವಹಿಸಿವೆ.ಕಳೆದ 25 ವರ್ಷಗಳ ಹಿಂದೆ ಆರಂಭವಾದ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ, ಇಂದು ರಜತ ಮಹೋತ್ಸವ ಆಚರಿಸಿಕೊಳ್ಳು ತ್ತಿರುವುದು ಸಂತೋಷದ ವಿಚಾರ.ಒಂದು ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ.ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಕಷ್ಟದ ಕೆಲಸ.ಇದು ನನ್ನ ಐವತ್ತು ವರ್ಷಗಳ ಸಹಕಾರ ಜೀವನದ ಅನುಭವ ಎಂದು ಕೆ.ಎನ್.ರಾಜಣ್ಣ ನುಡಿದರು.
ವಿದ್ಯೆ ಮನುಷ್ಯನ ಸ್ವಾಭಿಮಾನದ ಬದುಕಿಗೆ ನಾಂದಿ ಹಾಡುತ್ತದೆ.ಇಂದು ನಿಮ್ಮದೆ ಸಮುದಾಯದ ಮೇಘನ ಎಂಬ ವಿದ್ಯಾರ್ಥಿನಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ್ದು,ನೀವೆಲ್ಲರು ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತಿದ್ದೀರಿ,ಇದು ಉಳಿದ ಮಕ್ಕಳಿಗೂ ಪ್ರೇರಣೆಯಾಗಲಿದೆ.ವಿಶ್ವಕರ್ಮ ಸಮುದಾಯ ಯಾವುದೇ ವೃತ್ತಿ ಮಾಡಿ, ಮಕ್ಕಳಿಗೆ ಕಲಿಸಿ, ಅಡ್ಡಿಯಿಲ್ಲ.ಆದರೆ ಕುಲಕಸುಬಿನ ಜೊತೆಗೆ, ಮಕ್ಕಳಿಗೆ ವಿದ್ಯೆಯನ್ನು ನೀಡಿ, ಶ್ರಮ ಮತ್ತು ಶ್ರದ್ದೆಯಿಂದ ವಿದ್ಯೆಯನ್ನು ಒಲಿಸಿಕೊಂಡವರಿಗೆ ಸರ್ವಸ್ವವೂ ಸಿಗುತ್ತದೆ.ಹಾಗಾಗಿ ನೀವೆಲ್ಲರೂ ನಿಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರ ನ್ನಾಗಿ ರೂಪಿಸಿ ಎಂದು ಪೋಷಕರಿಗೆ ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಬಿ.ವಿ. ಗಂಗಾರಾಜಾಚಾರ್ ಮಾತನಾಡಿ,1997-98ರಲ್ಲಿ ಕೇವಲ 9 ಜನ ಹಿರಿಯರು ಸೇರಿ ಆರಂಭಿಸಿದ ಸಹಕಾರ ಸಂಘ ಇಂದು ವಾರ್ಷಿಕ 15 ಕೋಟಿ ರೂ ವಹಿವಾಟು ನಡೆಸುತಿದ್ದು, 18 ಲಕ್ಷ ರೂ ಲಾಭ ಗಳಿಸಿದೆ.ಷೇರುದಾರರಿಗೆ ಶೇ12ರ ಡಿವಿಡೆಂಟ್ ನೀಡುತ್ತಿದೆ.ಮುಂದಿನ ದಿನಗಳಲ್ಲಿ 50 ಲಕ್ಷ ರೂ ಇರುವ ಷೇರು ಬಂಡವಾಳವನ್ನು 1 ಕೋಟಿ ರೂಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬ್ಯಾಂಕಿನ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ ನಿರ್ದೇಶಕರುಗಳಿಗೂ, ಸಿಬ್ಬಂದಿ ವರ್ಗದವರಿಗೂ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಶಾಸಕ ಜಿ.ಬಿ.ಜೋತಿಗಣೇಶ್,ಪಾಲಿಕೆ ಸದಸ್ಯರಾದ ದೀಪಶ್ರೀ,ನ್ಯಾಮಿನಿ ಸದಸ್ಯ ನರಸಿಂಹಮೂರ್ತಿ,ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಅವರುಗಳು ಕಾರ್ಯಕ್ರಮಕ್ಕೆ ಆಗಮಿಸಿ, ಶುಭಕೋರಿದರು.ಈ ಸಂದರ್ಭದಲ್ಲಿ ಕಳೆದ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿಶ್ವಕರ್ಮ ಸಮುದಾಯದ ವಿಕಲಚೇನತರಾದ ಮೇಘನ,ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ ಹಿರಿಯ ನಿರ್ದೇಶಕರಗಳು,ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜೆ.ವೆಂಕಟೇಗೌಡ,ನಿವೃತ್ತ ನ್ಯಾಯಾಧೀಶರಾದ ಎಂ.ಸಿ.ಸಚ್ಚಿದಾನಂದ ಪ್ರಸಾದ್,ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಎಚ್.ಪಿ.ನಾಗರಾಜಾಚಾರ್,ವಿಶ್ವಕರ್ಮ ಸಾಹಿತ್ಯ ಪರಿಷತ್ತಿನ ಡಾ.ಕೆ.ವಿ.ಕೃಷ್ಣಮೂರ್ತಿ,ಚಿನ್ನ,ಬೆಳ್ಳಿ ಕೆಲಸಗಾರರ ಸಂಘದ ಜಿ.ಲಕ್ಷ್ಮಿನಾರಾಯಣ್, ಹೊರಪೇಟೆಯ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ವೆಂಕಟನರಸಪ್ಪಾಚಾರ್,ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ.ವಿ.ಗೋವರ್ಧ ನಾಚಾರ್,ನಿರ್ದೇಶಕರಾದಟಿ.ಪಿ.ವೇಣುಗೋಪಾಲಾಚಾರ್,ಟಿ.ಎ.ಸುಧೀರ್,ರಾಮಲಿಂಗಾಚಾರ್,ಜೆ.ಎನ್.ಗೋಪಾಲಕೃಷ್ಣಾಚಾರ್, ಟಿ.ಸಿ.ಡಮರಗೇಶ್, ಶ್ರೀಮತಿ ವೈ.ಎಸ್.ನಾಗರತ್ನ, ಶ್ರೀಮತಿ ವಿ.ಈಶ್ವರಿ,ಎಸ್.ಹರೀಶ್, ಫೈರೋಜ್, ವ್ಯವಸ್ಥಾಪಕರಾದ ಶ್ರೀಮತಿ ಜೆ.ಲೀಲಾ ಮತ್ತಿತರರು ಉಪಸ್ಥಿತರಿದ್ದರು.