ತುಮಕೂರು :


ಶತಾಯುಷಿ, ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಲ್ಪಡುತ್ತಿದ್ದ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಕುರಿತು 111 ಜನ ಕವಿಗಳು ತಾವು ಕಂಡಂತೆ ಶ್ರೀಗಳನ್ನು ವರ್ಣಿಸಿರುವ ಕಾವ್ಯ ಕುಸುಮಾಂಜಲಿ ಕವನ ಸಂಕಲನವನ್ನು ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡುವುದಾಗಿ ಕನ್ನಡಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.
ನಗರದ ವಿಘ್ನೇಶ್ವರ ಕಂಪರ್ಟ್‍ನಲ್ಲಿ ಎಸ್.ನಿತಿನ್ ಪ್ರಕಾಶನ ತುಮಕೂರು ಇವರು ಕವಯಿತ್ರಿ ಪರಿಮಳ ಸತೀಶ್ ಅವರು ಸಂಪಾದಿಸಿರುವ ಸಿದ್ದಗಂಗಾ ಶ್ರೀಗಳ ಕುರಿತ 111 ಜನ ಕವಿಗಳ ಕವಿತೆಗಳ ಕವನ ಸಂಕಲನ ಕಾವ್ಯ ಕುಸುಮಾಂಜಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ತ್ರಿವಿಧ ದಾಸೋಹಿಗಳಾದ ಶ್ರೀಗಳ ಬಗ್ಗೆ ಮಕ್ಕಳಿಗೆ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ದೇಶ ಸುತ್ತು,ಕೋಶ ಓದು ಎಂಬ ಗಾಧೆ ಮಾತಿದೆ.ಆದರೆ ಇಂದು ಬರೆಯುವವರ ಸಂಖ್ಯೆಯೂ ಕಡಿಮೆ ಇದೆ. ಓದುವವರ ಸಂಖ್ಯೆಯೂ ಕ್ಷೀಣಿಸಿದೆ.ಓದಬೇಕಾದ ಯುವಜನರು ಮೊಬೈಲ್ ದಾಸರಾಗಿ,ತಮ್ಮನ್ನೇ ಮರೆತಿದ್ದಾರೆ.ಇಂತಹ ಹೊತ್ತಿನಲ್ಲಿ ಶ್ರೀಶಿವಕುಮಾರಸ್ವಾಮಿಜಿ ಕುರಿತ ಕವಿತೆಗಳ ಸಂಪಾದಿಸುವುದು ನಿಜಕ್ಕೂ ದೊಡ್ಡ ಜವಾಬ್ದಾರಿಯ ಕೆಲಸ.ಒಂದಕ್ಷರವು ಅಪಚಾರವಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.ಈ ಎಲ್ಲಾ ಕೆಲಸಗಳನ್ನು ಪರಿಮಳ ಸತೀಶ್ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇವರಿಗೆ ವಿದ್ಯಾವಾಚಸ್ಪತಿ ಡಾ.ಕವಿತಾ ಕೃಷ್ಣ ಸಾಥ್ ನೀಡಿದ್ದಾರೆ. ಡಾ.ಕವಿತಾಕೃಷ್ಣ ಅವರು ನನ್ನಂತಹ ಅನೇಕರಿಗೆ ವೇದಿಕೆಯ ಮೇಲೆ ನಿಂತು ಮಾತನಾಡುವಂತಹ ಶಕ್ತಿ ತುಂಬಿದವರು,ನಿವೃತ್ತ ಜೀವನವನ್ನು ಸಾಹಿತ್ಯ ಕೃಷಿಗಾಗಿ ಮುಡಿಪಾಗಿಟ್ಟಿದ್ದಾರೆ.ಇಂತಹ ನೂರಾರು ಪುಸ್ತಕಗಳು ಹೊರಬರಲು ಕಾರಣೀಭೂತರಾಗಿದ್ದಾರೆ ಎಂದು ಧನಿಯಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವ್ಯ ಕುಸುಮಾಂಜಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,111 ವರ್ಷಗಳ ಕಾಲ ಬದುಕಿ,ಗಾಂಧಿಜೀಯಂತೆ ತಮ್ಮ ಬದುಕನ್ನು ಮುಂದಿನ ಪೀಳಿಗೆಗೆ ಮಾದರಿಯಾಗಿ ಬಿಟ್ಟು ಹೋದಂತಹ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಕುರಿತ 111 ಜನ ಕವಿಗಳ ಕವಿತೆಗಳನ್ನು ಒಳಗೊಂಡ ಕೃತಿ ಒಂದು ವರ್ಷದ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಕೋರೋನದಿಂದ ಸಾಧ್ಯವಾಗಿರಲಿಲ್ಲ.ಇಂದಿನ ದ್ವಂಧ್ವಾರ್ಥ, ಕಪೋಲ ಕಲ್ಪಿತ,ಕೃತಕ ಮತ್ತು ಕ್ಷಣಿಕ ಮನರಂಜನೆಯ ಕಾವ್ಯಗಳಿಗಿಂತ ಈ ಪುಸ್ತುಕ ವಿಭಿನ್ನವಾಗಿದೆ. ಶ್ರೀಗಳ ಲಿಂಗೈಕ್ಯದ ನಂತರವು ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಈ ಪುಸ್ತಕ ಸಹಕಾರಿ.ಎಲ್ಲಿಯೂ ಭಕ್ತಿಯ ಚೌಕಟ್ಟು ಮೀರದೆ, ನೂರಾರು ಜನರ ಕಂಡಂತೆ ಸಿದ್ದಗಂಗಾ ಶ್ರೀಗಳನ್ನು ಓದುಗರ ಮುಂದಿಟ್ಟಿದ್ದಾರೆ ಎಂದರು.
ಕಾವ್ಯ ಕುಸುಮಾಂಜಲಿ ಕವನ ಸಂಕಲನ ಕುರಿತು ಮಾತನಾಡಿದ ಕಸಾಪ ನಗರ ಘಟಕದ ಅಧ್ಯಕ್ಷ ಶ್ರೀಮತಿ ಕಮಲ ಬಡ್ಡಿಹಳ್ಳಿ, ಭಕ್ತಿಗೆ ಪದವಿಗಳು ಬೇಕಿಲ್ಲ. ಅಂತರಂಗ, ಬಹಿರಂಗ ಶುದ್ದಿ ಇದ್ದರೆ ಸಾಕು. ಅದು ಗಾಂಧೀಜಿ ಹೇಳಿದಂತೆ ಆತ್ಮದ ಜೊತೆಗೆ ಬೇರೆತು ಹೋಗುತ್ತದೆ. ನಿಜವಾಗಿ ಸನ್ಯಾಸಿಯಾಗಿ ಲಕ್ಷಾಂತರ ಮಕ್ಕಳನ್ನು ಪೋಷಿಸಿದವರು.ಮಾತೃ ಹೃದಯದ ಶ್ರೀಗಳನ್ನು ವರ್ಣಿಸುವುದು ಕಷ್ಟದ ಕೆಲಸ. ಆ ಕೆಲಸ ಮಾಡಿರುವ ಪರಿಮಳ ಸತೀಶ್ ನಿಜಕ್ಕೂ ಅಭಿನಂದಾರ್ಹರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ,ಶ್ರೀಗಳಿಗೆ ತಮ್ಮ ಪೂರ್ವಾಶ್ರಮದಲ್ಲಿ ತಾಯಿಯ ಸುಖಃ ದೊರೆಯದಿದ್ದರೂ,ತಾವು ಮಾತ್ರ ಮಾತೃ ಹೃದಯ ಹೊಂದಿ, ಲಕ್ಷಾಂತರ ಮಕ್ಕಳಿಗೆ ತಾಯಿ ವಾಲತ್ಸದಿಂದ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿದವರು. ಅವರ ಕುರಿತು 111 ಜನ ಕವಿಗಳು ತಾವು ಕಂಡಂತೆ ಶ್ರೀಗಳನ್ನು ವರ್ಣಿಸಿದ್ದಾರೆ.ಅದರಲ್ಲಿ ನನ್ನದೂ ಒಂದು ಕವಿತೆ ಇದೆ.ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಜೀವನ ಚರಿತ್ರೆ ಭಗವದ್ಗಿತೆಗೆ ಸಮ. ಗುರು ಮತ್ತು ಗುರಿ ಎರಡನ್ನು ಇಟ್ಟುಕೊಂಡು ಸೇವೆಯಲ್ಲಿ ತೊಡಗಿದವರು ಎಂದರು.
ವೇದಿಕೆಯಲ್ಲಿ ಟಿ.ಆರ್.ಸದಾಶಿವಯ್ಯ,ಪಾಲಿಕೆ ಸದಸ್ಯೆ ಶ್ರೀಮತಿ ಚಂದ್ರಕಲಾ ಪುಟ್ಟರಾಜು,ಶ್ರೀಮತಿ ಅಶ್ವಿನಿ ಡಾ.ಉಮಾಶಂಕರ್, ಶ್ರೀಮತಿ ದೇವಪ್ರಕಾಶ್ ಶಾಂಪುರ್,ಡಾ.ಪ್ರಕಾಶ್ ನಾಡಿಗ್,ಕೃತಿಕಾರರಾದ ಪರಿಮಳ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)