ತುಮಕೂರು:
ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳ ವಾಪಸ್, ವಿದ್ಯುತ್ ಖಾಸಗಿ ಬಿಲ್ ಜಾರಿ ಮಾಡದಂತೆ ಒತ್ತಾಯಿಸಿ ಸೆಪ್ಟಂಬರ್ 12 ರಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಸರಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ರೈತರ ವಿರೋಧದಿಂದ ವಾಪಸ್ ಪಡೆದರೆ, ರಾಜ್ಯ ಸರಕಾರ ಮಾತ್ರ,ಇಂದು,ನಾಳೆ ಎಂದು ಸಬೂಬು ಹೇಳುವ ಮೂಲಕ ದಿನಗಳನ್ನು ದೂಡುತ್ತಿದೆ. ಹಾಗಾಗಿ ಸೆಪ್ಟಂಬರ್ 12 ರಿಂದ ಆರಂಭವಾಗುವ ಅಧಿವೇಶನದಲ್ಲಿಯೇ ರೈತರಿಗೆ ಮಾರಕವಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ,ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಬೇಕೆಂದು ಆಗ್ರಹಿಸಿ, ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.
ಡಬಲ್ ಇಂಜಿನ್ ಸರಕಾರದಿಂದ ರಾಜ್ಯಕ್ಕೆ ಅನುಕೂಲ ಇಲ್ಲದಂತಾಗಿದೆ.ಆದರೆ ಬಿಜೆಪಿ ರಾಜಕೀಯವಾಗಿ ಹೆಚ್ಚು ಅನುಕೂಲ ಪಡೆದುಕೊಳ್ಳುತ್ತಿದೆ.ಕರ್ನಾಟಕವನ್ನು ತಮ್ಮ ಕಾರ್ಯಕ್ರಮಗಳ ಪ್ರಯೋಗಶಾಲೆಯಾಗಿ ಮಾಡಿಕೊಂಡು,ರಾಜ್ಯದ ರೈತರು, ಕಾರ್ಮಿಕರು,ಬಡವರು,ಕೃಷಿಕೂಲಿಕಾರರು ಪರದಾಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ.ಸಾರ್ವಜನಿಕ ಉದ್ಯಿಮೆಗಳನ್ನು ಖಾಸಗೀ ಕರಣ ಮಾಡಿ,ಯುವಜನರು ಉದ್ಯೋಗಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿಯನ್ನು ಡಬಲ್ ಇಂಜಿನ್ ಸರಕಾರ ಸೃಷ್ಟಿಸಿದೆ. ಇದರ ವಿರುದ್ದ ರೈತರ ಹೋರಾಟ ನಿರಂತರವಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ರಾಜ್ಯದ ಸಣ್ಣ,ಪುಟ್ಟ ಹಿಡುವಳಿದಾರರು ಕೃಷಿಯ ಜೊತೆಗೆ ಹೈನುಗಾರಿಕೆ ಮಾಡಿಕೊಂಡು,ಜೀವನ ಸಾಗಿಸುತ್ತಿದ್ದ ರೈತರನ್ನು ಹೈನುಗಾರಿಕೆಯಿಂದ ಹೊರಗಿಡುವ ಹುನ್ನಾರವನ್ನು ಸರಕಾರ ಮಾಡಲು ಹೊರಟಿದೆ. ಸಬ್ಸಿಡಿ ಹೆಸರಿನಲ್ಲಿ 2000-3000 ಹಸುಗಳ ಸಾಕಲು ದೊಡ್ಡ ದೊಡ್ಡ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟು, 2-3 ಹಸುಗಳನ್ನು ಕಟ್ಟಿಕೊಂಡು ಹೈನುಗಾರಿಕೆಯಲ್ಲಿ ಜೀವನ ನಡಸುತ್ತಿದ್ದ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮುಂದಾಗಿದೆ ಎಂದು ಆರೋಪಿಸಿದ ಕೋಡಿಹಳ್ಳಿ ಚಂದ್ರಶೇಖರ್,ಭೂ ಸುದಾರಣಾ ಕಾಯ್ದೆ ಮೂಲಕ ಬಡವರ ಭೂಮಿಯನ್ನು ಉಳ್ಳವರಿಗೆ ನೀಡಲು ಅನ್‍ಲೈನ್ ಮೂಲಕ ನೊಂದಣಿಗೆ ಅವಕಾಶ ನೀಡಿದ್ದಾರೆ.ಇದರಿಂದ ಸಣ್ಣ ಹಿಡುವಳಿದಾರರು ಕೂಲಿ ಕಾರ್ಮಿಕರಾಗಿ ಬದಲಾಗುವ ದೊಡ್ಡ ಅಪಾಯ ಎದುರಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ಉದ್ದಿಮೆಗಳು, ರಸ್ತೆ, ರೈಲ್ವೆ,ವಿಮಾನ ಇನ್ನಿತರ ಸೇವೆಗಳನ್ನು ಖಾಸಗೀಕರಣ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.ಬಲಾಡ್ಯರಿಗೆ ಶಕ್ತಿ ತುಂಬಿ, ಬಡವರನ್ನು ಮತ್ತಷ್ಟು ಮೃತ್ಯಕೂಪಕ್ಕ ತಳ್ಳುವ ಪ್ರಕ್ರಿಯೆಯಲ್ಲಿದೆ.ಅತಿವೃಷ್ಟಿಯಿಂದ ಇಡೀ ರಾಜ್ಯವೇ ಮಳೆ ನೀರಿನಿಂದ ಅನಾಹುತಕ್ಕೆ ಒಳಗಾಗಿದ್ದರೂ ಸಮರ್ಪಕ ಪರಿಹಾರ ನೀಡದೆ,
ಜನರ ಹಣದಲ್ಲಿ ಜನೋತ್ಸವ ಮಾಡಲು ಹೊರಟಿರುವುದು ನಾಚಿಕೇಗೆಡಿನ ಸಂಗತಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಟೀಕಿಸಿದರು.
ಸೆಪ್ಟಂಬರ್ 12 ರ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ರಾಜ್ಯ ಮೂಲೆ ಮೂಲೆಗಳಿಂದ 15-20 ಸಾವಿರ ಜನರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರಗೆ ಮೆರವಣಿಗೆ ನಡೆಯಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್,ಭಕ್ತರಹಳ್ಳಿ ಭೈರೇಗೌಡ,ಜಿಲ್ಲಾಧ್ಯಕ್ಷ ಆನಂದಪಟೇಲ್, ಧನಂಜಯ ಆರಾಧ್ಯ,ವಿವಿಧ ತಾಲೂಕುಗಳ ಅಧ್ಯಕ್ಷರಾದ ಬಸ್ತಿಹಳ್ಳಿ ರಾಜಣ್ಣ, ಅನಿಲ್,ಕೊರಟಗೆರೆ ಸಿದ್ದರಾಜು, ನಾಗೇಂದ್ರ, ನಾಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.