ತುಮಕೂರು :
ನಗರದ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾನೂನು ಕಾಲೇಜು ಮತ್ತು ಕಾನೂನು ವಿದ್ಯಾರ್ಥಿಗಳ ಸಹಯೋಗದಲ್ಲಿ ಸೋಮವಾರ ಭಾರತರತ್ನ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಮರಿಚನ್ನಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಡಾ|| ರಾಧಾಕೃಷ್ಣನ್ ಅವರು ಭಾರತದ ಅತ್ಯುನ್ನತ ಪ್ರಶಸ್ತಿ ಭಾರತರತ್ನ ಪುರಸ್ಕøತರಾಗಿ, ಮೊದಲ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಶಿಕ್ಷಕ ವೃತ್ತಿ ಅತ್ಯಂತ ಪ್ರಿಯವಾಗಿತ್ತು ಎಂದು ಸ್ಮರಿಸಿದರು. ಇಡೀ ಶಿಕ್ಷಕ ಸಮುದಾಯಕ್ಕೆ ಅವರು ಆದರ್ಶಪ್ರಾಯರಾಗಿದ್ದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳುವ ಮೂಲಕ ಶಿಕ್ಷಕ ವೃತ್ತಿ ಬದುಕನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಭೋಧನ ವೃತ್ತಿಯಲ್ಲಿರುವ ಎಲ್ಲಾ ಶಿಕ್ಷಕರಿಗೆ ಪ್ರೀತಿ ಪಾತ್ರರಾಗುವುದರ ಮೂಲಕ ಗುರುಗಳನ್ನು ಗೌರವಿಸಬೇಕು. ವಿದ್ಯಾರ್ಥಿಗಳ ಗುರಿ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಗುರುಗಳ ಮಹತ್ವವನ್ನು ತಿಳಿಸಿದರು.
ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ವಿನೆಟ್ ವಿಮಲ ಅವರು ಮಾತನಾಡಿ ಭಾರತ ರತ್ನ ಡಾ|| ರಾಧಾಕೃಷ್ಣನ್ ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಶ್ರೇಷ್ಠ ಚಿಂತಕರಾಗಿದ್ದರು. ಅವರೊಬ್ಬ ರಾಷ್ಟ್ರ ಕಂಡ ಶ್ರೇಷ್ಠ ರಾಷ್ಟ್ರಪತಿ, ಉಪರಾಷ್ಟ್ರಪತಿಗಳಾಗಿದ್ದರೂ ಸಹ ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದವರು. ಅಂತೆಯೇ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತವಾದುದನ್ನು ಸಾಧಿಸಬೇಕೆಂದು ತಿಳಿಸಿದರು.
ಶಿಕ್ಷಕ ಭಾಂಧವರು ತಮ್ಮೆಲ್ಲ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ವಿದ್ಯಾರ್ಥಿಸ್ನೇಹಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದರು.
ಶ್ರೀ ಕೃಷ್ಣ ವಿದ್ಯಾಸಂಸ್ಥೆ ಅಧ್ಯಕ್ಷೆ ಡಾ|| ಲತಾ. ಆರ್, ಉಪಾಧ್ಯಕ್ಷೆ ಕು|| ಆರ್. ವೀಣಾ ಕಾರ್ಯಕ್ರಮ ಕುರಿತು ಮಾತನಾಡಿದರು.
ಶ್ರೀ ಕೃಷ್ಣ ಕಾನೂನು ಕಾಲೇಜಿನ ಉಪನ್ಯಾಸರಾದ ಮಂಜುಳ, ರಾಜೇಶ್ವರಿ, ಉಮಾಶಂಕರ್, ಶುಭ ಅವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು.
ಆಡಳಿತಾಧಿಕಾರಿ ಆಶೋಕ್. ಕೆ ಇದ್ದರು. ಕಾನೂನು ವಿದ್ಯಾರ್ಥಿ ಸೋಮಶೇಖರ್ ಅಲ್ಯಾಳ ಕಾರ್ಯಕ್ರಮ ನಿರೂಪಿಸಿದರು. ಶೈಲಾ ಸ್ವಾಗತ ಪರಿಚಯ ನಡೆಸಿಕೊಟ್ಟರು. ಪರಮೇಶ್ ವಂದಿಸಿದರು. ಶ್ರೀ ಕೃಷ್ಣ ಕಾನೂನು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಮತ್ತಿತರರರು ಹಾಜರಿದ್ದರು.