ತುಮಕೂರು :
ನಾಡಪ್ರಭು ಕೆಂಪೇಗೌಡರ 512ನೇ ಜನ್ಮ ಜಯಂತಿ,12ನೇ ವರ್ಷದ ಪ್ರತಿಭಾಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸೆಪ್ಟಂಬರ್ 10ಶನಿವಾರ ಕುಂಚಟಿಗ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕೆಂಪೇಗೌಡ ಜಯಂತೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದ್ದಾರೆ.
ನಗರದ ಕುಂಚಿಟಿಗ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ ಸಂಬಂಧ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕರಾದ ಹನುಮಂತರಾಯಪ್ಪ ಹಾಗೂ ಲೋಕೇಶ್ ಡಿ.ನಾಗರಾಜಯ್ಯ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ(ರಿ), ತುಮಕೂರು ಜಿಲ್ಲೆಯ ಸಮಸ್ತ ಒಕ್ಕಲಿಗ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.
ನಾಡಪ್ರಭು ಕೆಂಪೇಗೌಡ ಅವರ 512ನೇ ಜಯಂತೋತ್ಸವದ ಅಂಗವಾಗಿ ನಗರದ ಬಿ.ಜಿ.ಎಸ್ ವೃತ್ತ(ಟೌನ್‍ಹಾಲ್)ದಿಂದ ಎಂ.ಜಿ.ರಸ್ತೆ, ಹೊರಪೇಟೆ ರಸ್ತೆಯ ಮೂಲಕ ಕುಂಚಟಿಗ ಭವನಕ್ಕೆ ಕೆಂಪೇಗೌಡ ಮೂರ್ತಿಯನ್ನು ಬೆಳ್ಳಿಯ ರಥದಲ್ಲಿ, 10ಕ್ಕೂ ಹೆಚ್ಚು ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಮೆರವಣಿಗೆಯಲ್ಲಿ ತರಲಾಗುವುದು.ಮರವಣಿಗೆ ನಂತರ ಪ್ರತಿಭಾಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.ಇದೇ ಸಂದರ್ಭದಲ್ಲಿ ಶ್ರೀಭೈರವೇಶ್ವರ ಬ್ಯಾಂಕ್ ಮತ್ತು ನಳಂದ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ವೈ.ಸಿ.ಲಕ್ಕಪ್ಪ ಅವರಿಗೆ ಈ ಸಾಲಿನ ಜಿಲ್ಲಾ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹನುಮಂತರಾಯಪ್ಪ ತಿಳಿಸಿದರು.
ಕಾರ್ಯಕ್ರಮವೂ ಭೈರವೈಕ್ಯ ಡಾ.ಶ್ರೀಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರ ಕೃಪಾಶೀರ್ವಾದದೊಂದಿಗೆ,ಪೂಜ್ಯರಾದ ಡಾ.ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀನಂಜಾವಧೂತ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀಮಂಗಳನಾಥ ಸ್ವಾಮೀಜಿಯವರ ದಿವ್ಯ ಉಪಸ್ತಿತಿಯಲ್ಲಿ ಕಾರ್ಯಕ್ರಮಗಳು ಜರುಗಲಿದ್ದು,ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಮಾಜಿ ಸಚಿವರಾದ ಡಿ.ನಾಗರಾಜಯ್ಯ, ಟಿ.ಬಿ.ಜಯಚಂದ್ರ ಹಾಗೂ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕರಾದ ಡಿ.ಸಿ.ಗೌರಿಶಂಕರ್,ಎಸ್.ಆರ್.ಶ್ರೀನಿವಾಸ್,ಎಂ.ವೀರಭದ್ರಯ್ಯ,ಮಸಾಲೆಜಯರಾಂ,ಡಾ.ಹೆಚ್.ಡಿ.ರಂಗನಾಥ್,ಡಾ.ರಾಜೇಶ್‍ಎಂ.ಗೌಡ, ವೈ.ಎ.ನಾರಾಯಣಸ್ವಾಮಿ,ಚಿದಾನಂದ ಎಂ.ಗೌಡ,ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ,ಹೆಚ್.ನಿಂಗಪ್ಪ,ಬಿ.ಸುರೇಶಗೌಡ, ಸಿ.ವಿ.ಮಹಾ ಲಿಂಗಯ್ಯ,ಬೆಮೆಲ್‍ಕಾಂತರಾಜು ಅವರುಗಳು ಭಾಗವಹಿಸಲಿದ್ದಾರೆ ಎಂದು ಹನುಮಂತರಾಯಪ್ಪ ಸಭೆಗೆ ವಿವರಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಸಮಿತಿ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯ ಹಾಗೂ ತುಮಕೂರು ಜಿಲ್ಲೆಯ ವಿವಿಧ ಒಕ್ಕಲಿಗರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಎಲ್ಲಾ ಒಕ್ಕಲಿಗ ಸಮುದಾಯದ ಮುಖಂಡರು,ಜನರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಮನವಿ ಮಾಡಿದ್ದಾರೆ.
ಪ್ರತಿಭಾಪುರಸ್ಕಾರಕ್ಕೆ ಆಗಮಿಸಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರು, ಕಾರ್ಯಕ್ರಮ ನಡೆಯುವ ಸೆಪ್ಟಂಬರ್ 10ರ ಬೆಳಗ್ಗೆ 9:30 ಕ್ಕೆ ನಗರದ ಬಿಜಿಎಸ್ ವೃತ್ತಕ್ಕೆ ಆಗಮಿಸಿ, ಕೆಂಪೇಗೌಡ ಜಯಂತೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾರ್ಯಕ್ರಮದ ಆಯೋಜಕರು ಮನವಿ ಮಾಡಿದ್ದಾರೆ.