ತುಮಕೂರು :
ನಗರದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಸಹಕರಿಸಿದ ಪಾಲಿಕೆ ಸದಸ್ಯರು, ಅಧಿಕಾರಿ ವರ್ಗ, ನಾಗರಿಕರಿಗೆ ಪಾಲಿಕೆಯ ಮೇಯರ್ ಬಿ.ಜಿ.ಕೃಷ್ಣಪ್ಪ ಅವರು ಕೃತಜ್ಞತೆ ಸಲ್ಲಿಸಿದರು.
ತಮ್ಮ ಒಂದೂವರೆ ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಲೋಪದೋಷಗಳು ಬರದಂತೆ ನಗರದಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆ, ಬೀದಿದೀಪ ವ್ಯವಸ್ಥೆ, ಮತ್ತಿತರ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ನಗರದ ಚಿತ್ರಣವನ್ನು ಬದಲಿಸಲಾಗಿದೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ನಗರದ ಸೌಂದರ್ಯೀಕರಣಕ್ಕೆ
ಆದ್ಯತೆಯನ್ನು ನೀಡಲಾಗಿದೆ ಎಂದರಲ್ಲದೇ ಜೆ.ಸಿ ರಸ್ತೆ, ಬೆಳಗುಂಬ, ಸಾಬರಪಾಳ್ಯ ರಸ್ತೆಗಳ ಅಗಲೀಕರಣದ ಜೊತೆಗೆ ಮೇಳೆಕೊಟೆ, ಚಾಮುಂಡೇಶ್ವರಿ ದೇವಿ ರಸ್ತೆಯನ್ನು 40 ಅಡಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸುವುದರ ಮೂಲಕ ತುಮಕೂರು ಪಾಲಿಕೆ ಮೊದಲನೇ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ “ಸಿಲ್ವರ್ ಮೆಡಲ್” ಪ್ರಶಸ್ತಿ ಪಡೆದಿದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದಲ್ಲಿಯೇ 27ನೇ ಸ್ಥಾನ ಗಳಿಸುವುದರೊಂದಿಗೆ ತುಮಕೂರು ದೇಶದ ಸ್ವಚ್ಛ ನಗರಗಳಲ್ಲಿ ಒಂದೆನಿಸಿದೆ ಎಂದರು.
ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸುಮಾರು 24 ಆಹಾರ ಮಳಿಗೆಗಳನ್ನು ತೆರೆದು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಿ.ಎಂ ಸ್ವನಿಧಿ ಕಾರ್ಯಕ್ರಮದಡಿ 2938 ಮಂದಿಗೆ ಬೀದಿ ಬದಿ ವ್ಯಾಪಾರ ಕೈಗೊಳ್ಳಲು ತಲಾ 10 ಸಾವಿರ ರೂ. ಸಾಲವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯ ಗಾರೆ ನರಸಯ್ಯನಕಟ್ಟೆ, ಶೆಟ್ಟಿಹಳ್ಳಿಕೆರೆ ಅಭಿವೃದ್ಧಿಗೆ ಪೂರಕ ಕ್ರಮವಹಿಸಲಾಗಿದೆ. ನಗರದಲ್ಲಿ ಸುಮಾರು 15 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಒತ್ತುವರಿಯಾದ ರಾಜಗಾಲುವೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಸಂತ್ರಸ್ತರಿಗೆ ಅಗತ್ಯ ಪರಿಹಾರ ಕ್ರಮಕೈಗೊಳ್ಳಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟ, ನಗರದ ವಿವಿಧಡೆ ಅದ್ವಾನವಾಗಿರುವ ರಸ್ತೆಗಳು, ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ, ನಿರ್ಗತಿಕ ಕೇಂದ್ರದ ಅಸಮರ್ಪಕ ನಿರ್ವಹಣೆ ಕುರಿತಂತೆ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನಗರಕ್ಕೆ ಪ್ರಮುಖವಾಗಿ ಕುಡಿಯುವ ನೀರು ಒದಗಿಸುವ ಅಮಾನಿಕೆರೆ, ದೇವರಾಯಪಟ್ಟಣ, ಶೆಟ್ಟಿಹಳ್ಳಿ ಕೆರೆ, ಮರಳೂರು, ಮತ್ತಿತರ ಕೆರೆಗಳನ್ನು ತುಂಬಿಸಿ 24×7 ನಗರ ನೀರು ಸರಬರಾಜಿಗೆ ಹಾಗೂ ಪಾಲಿಕೆ ವ್ಯಾಪ್ತಿಯೊಳಗಿನ ಪ್ರದೇಶವಲ್ಲದೆ ನಗರದ ಹೊರ ವಲಯ ಪ್ರದೇಶಾಭಿವೃದ್ಧಿಗಾಗಿಯೂ ವಿವಿಧ ಇಲಾಖೆಗಳಿಂದ ವಿಶೇಷ ಅನುದಾನ ಮಂಜೂರಾತಿಗಾಗಿ ಶ್ರಮಿಸಿದ ಸಂಸದ ಜಿ.ಎಸ್ ಬಸವರಾಜು, ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಪಾಲಿಕೆ ಸದಸ್ಯರಿಗೆ ಅವರು ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.