ತುಮಕೂರು :


ಕರ್ನಾಟಕದಲ್ಲಿ ಬಸವಣ್ಣನವರು ನಿಮ್ನ ವರ್ಗಗಳನ್ನು ಒಂದು ಗೂಡಿಸುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದಂತೆ ಕೇರಳ ಮತ್ತು ಆಸುಪಾಸುಗಳಲ್ಲಿ ಮಹರ್ಷಿ ನಾರಾಯಣಗುರುಗಳು ಸಮಾಜದಲ್ಲಿದ್ದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವ ಮೂಲಕ ತಳ ವರ್ಗಗಳಲ್ಲಿ ಜಾಗೃತಿ ಮೂಡಿಸಿದರು ಎಂದು ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಜಯಕುಮಾರ್ ತಿಳಿಸಿದ್ದಾರೆ.
ನಗರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಾರಾಯಣಗುರು ಟ್ರಸ್ಟ್ ,ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ನಾರಾಯಣಗುರು ಅವರು ಸಮಾಜ ಸೇವೆಯನ್ನು ಕಣ್ಣಾರೆ ಕಂಡ ಮಹಾತ್ಮಗಾಂಧಿ ಅವರು, ನಾರಾಯಣ ಗುರುಗಳನ್ನು ಮಹರ್ಷಿ ಎಂದು ಸಂಬೋಧಿಸಿದ್ದರು ಎಂದರು.
ನಮ್ಮ ಹಿರಿಯರಾದ ಜೆ.ಪಿ.ನಾರಾಯಣಸ್ವಾಮಿಯವರು ಇತರೆ ಸಮುದಾಯಗಳ ಪರ್ವತಕರಿಗೆ ಸಿಕ್ಕ ಮರ್ಯಾದೆ ನಾರಾಯಣಗುರುಗಳಿಗೂ ಸಿಗಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರ ಮೂಲಕ ನಾರಾಯಣಗುರುಗಳ ಜಯಂತಿ ಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ..ಜಿಲ್ಲೆಯಲ್ಲಿಯೂ ಸೆಪ್ಟಂಬರ್ 20 ರಂದು ನಾರಾಯಣಗುರುಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅಂದು ಸಮುದಾಯದ ಎಲಾ ಮುಖಂಡರು, ಮಕ್ಕಳು ಭಾಗವಹಿಸಿ, ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದರು.
ಆರ್ಯ ಈಡಿಗರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ಇಂದು ಜಿಲ್ಲಾಡಳಿತದಿಂದ ಮಹರ್ಷಿ ನಾರಾಯಣಗುರುಗಳ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. 20ನೇ ತಾರೀಖು ಸಂಘದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅಂದು ನಗರ ಟೌನ್‍ಹಾಲ್‍ನಿಂದ ನಾರಾಯಣಗುರುಗಳ ಭಾವಚಿತ್ರದ ಮೆರವಣಿಗೆ ಆಯೋಜಿಸಿದ್ದು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಧನಿಯಕುಮಾರ್ ಮಾತನಾಡಿ,ಒಂದು ಸಮುದಾಯದ ಅಭಿವೃದ್ದಿಗೆ ಶಿಸ್ತು ಮತ್ತು ಸಮಯ ಪ್ರಜ್ಞೆ ಹೆಚ್ಚು ಕೆಲಸ ಮಾಡುತ್ತದೆ. ಈಡಿಗ ಸಮುದಾಯದ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿ ಉಚಿತ ಬಸ್ ಪಾಸ್,ಕನ್ನಡ ಮಾಧ್ಯಮದವರಿಗೆ ವಿಶೇಷ ಅಂಕ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಇಂತಹ ಅನೇಕ ಕಾರ್ಯಕ್ರಮಗಳು ನಮಗೆ ಸ್ಪೂರ್ತಿಯಾಗಬೇಕು. ಅವರ ರೀತಿಯಲ್ಲಿಯೇ ನಾವೆಲ್ಲರೂ ಶಿಕ್ಷಣವಂತರಾಗಿ ನಾವೆಲ್ಲರೂ ಸಮುದಾಯದ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಕರ್ನಾಟಕಕ್ಕೆ ಬಸವಣ್ಣನವರ ರೀತಿ, ಕೇರಳ ರಾಜ್ಯದಲ್ಲಿ ನಾರಾಯಣಗುರುಗಳು ಅಪಾರ ಬದಲಾವಣೆಗೆ ಶ್ರಮಿಸಿದವರು. ಅವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್‍ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಮಲ್ಲಸಂದ್ರ ಶಿವಣ್ಣ, ನಾರಾಯಣಗುರು ಟ್ರಸ್ಟ್ ಉಪಾಧ್ಯಕ್ಷ ವೆಂಕಟಸ್ವಾಮಿ,ಮುಖಂಡರಾದ ಪುರುಷೋತ್ತಮ್, ರಾಜೇಶ್, ರಾಜನ್, ಧನಿಯಕುಮಾರ್, ಪ್ರೆಸ್ ರಾಜಣ್ಣ, ಮತ್ತಿತರರಿದ್ದರು.

(Visited 7 times, 1 visits today)