ತಿಪಟೂರು :
ತಾಲೂಕು ದೇಶದಲ್ಲಿಯೇ ಕೊಬ್ಬರಿ ಮತ್ತು ತೆಂಗನ್ನು ಉತ್ಪಾದಿಸುವ ಅತ್ಯಂತ ದೊಡ್ಡ ತಾಲೂಕು ಆಗಿದ್ದು, ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಡೀ ತಾಲೂಕಿನಿಂದ ಅಡುಗೆ ಎಣ್ಣೆಯನ್ನು ಮತ್ತು ದಿನನಿತ್ಯ ಬಳಸುವ ಎಣ್ಣೆಯನ್ನು ಉತ್ಪಾದಿಸಿ ದೇಶ-ವಿದೇಶಗಳಿಗೆ ರಫ್ತು ಮಾಡುವ ಮೂಲಕ ಇಲ್ಲಿನ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಇಲ್ಲಿನ ಜನಪ್ರತಿನಿಧಿಗಳು ಮಾಡಬೇಕಿತ್ತು. ಆದರೆ, ಅವರು ತಮ್ಮ ಸ್ವ-ಹಿತಾಸಕ್ತಿಗಾಗಿ ತಿಪಟೂರನ್ನು ಕಡೆಗಣಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಂದಿನ ಸಂಪನ್ಮೂಲಗಳನ್ನು ಬಳಸಿಕೊಂಡು ತಿಪಟೂರನ್ನು ಮಾದರಿ ತಾಲೂಕನ್ನಾಗಿ ಮಾಡುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ ತಿಳಿಸಿದರು.
ತಿಪಟೂರು ನಗರದಲ್ಲಿ ಗುರುವಾರ ರಾಷ್ಟ್ರ ಸಮಿತಿ ಪಕ್ಷ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು “ಕರುನಾಡು ಕಟ್ಟೋಣ” ಕನ್ನಡ ನಾಡಿನ ಪ್ರಣಾಳಿಕೆ ಕುರಿತು ಸ್ವಾಭಿಮಾನಿ ಕನ್ನಡಗರ ಜೊತೆ ಸಂವಾದವನ್ನು ಸೆ.8,9ರ ಎರಡು ದಿನಗಳ ಕಾಲ ತಿಪಟೂರು ತಾಲೂಕಿನಲ್ಲಿ ಆಯೋಜಿಸಿದ್ದು, ತಾಲೂಕಿನಲ್ಲಿ ಮಳೆಯಿಂದಾಗಿರುವ ಅನಾಹುತಗಳನ್ನು ರೈತರಿಗಾಗಿರುವ ಬೆಳೆನಷ್ಟ ಮತ್ತು ವಸತಿ ಕಳೆದುಕೊಂಡಿರುವ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ಒದಗಿಸಲು ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.
ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ದಶಕಗಳಿಂದ ಹಲವು ಸಂಘ, ಸಂಸ್ಥೆ ಹಾಗೂ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ತಿಪಟೂರನ್ನು ಜಿಲ್ಲಾ ಕೇಂದ್ರದವಾಗಿ ರಾಷ್ಟ್ರ ಸಮಿತಿ ಪಕ್ಷವು ಮಾಡಲು ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತದೆ ಎಂದರು.
ತಾಲೂಕಿನಲ್ಲಿ ಅಭಿವೃದ್ಧಿಗೆ ವಿಫೂಲ ಅವಕಾಶಗಳಿದ್ದು, ವಂಶ ಪಾರಂಪರ್ಯವಾಗಿ ಬೆಳೆದು ಬಂದಿರುವ ನೇಕಾರಿಕೆ ಮತ್ತು ಇನ್ನೂ ಹಲವು ಉಪಕಸುಬುಗಳನ್ನು ಮಾಡಲು ಯುವ ಜನರಿಗೆ ತರಬೇತಿ ನೀಡಿ ಅವರಿಗೆ ಜ್ಞಾನ ಕೌಶಲ್ಯ ಮತ್ತು ಅನುದಾನವನ್ನು ನೀಡಿದರೆ ಇಲ್ಲಿನ ಯುವಜನರೇ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಬಲ್ಲರು. ಇನ್ನು ಮಹಿಳೆಯರಿಗೆ ತೆಂಗು ಉತ್ಪಾದನಾ ತಿಂಡಿ ಪದಾರ್ಥಗಳು ಮತ್ತು ಎಣ್ಣೆ ಉತ್ಪಾದನೆ ಹಾಗೂ ತೆಂಗಿನ ಮೌಲ್ಯವರ್ಧನೆ ಮಾಡುವ ಕೌಶಲ್ಯಾಧಾರಿತ ತರಬೇತಿ ನೀಡಿ. ಗ್ರಾಪ ಪಂಚಾಯಿತಿ ಮಟ್ಟದಲ್ಲೇ ಉದ್ಯೋಗ ಸೃಷ್ಟಿ ಮಾಡಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲಾಗುವುದು ಎಂದರು.
ತಿಪಟೂರು ವಿಧಾನ ಸಭೆಯ ಸಂಭಾವ್ಯ ಸಭ್ಯರ್ಥಿ ಗಂಗಾಧರ ಕರಿಕೆರೆ ಅವರು ಮಾತನಾಡಿ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಆಡಳಿತ ಕಚೇರಿಯಲ್ಲಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಿ ಗಾಂಧೀಜಿಯವರ ಕನಸಿನ ಪಾರದರ್ಶಕ ಆಡಳಿತ ಸೇವೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಜನರಿಗೆ ತಲುಪಿಸುತ್ತದೆ ಎಂದರು.
ತಾಲೂಕಿನಲ್ಲಿ ಕನ್ನಡ ಶಾಲೆಗಳ ಕೊರತೆ ಇದ್ದು, ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಎಲ್ಲ ಹೋಬಳಿ ಮತ್ತು ತಾಲೂಕು ಕೇಂದ್ರ ದಲ್ಲಿ ಸುಸಜ್ಜಿತ ಗ್ರಂಥಾಲಯ ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಿ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆಯುವಂತೆ ಮಾಡಲಾಗುವುದು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸದಸ್ಯರು ಮತ್ತು ಅಲ್ಲಿನ ಸ್ಥಳೀಯ ಜನರನ್ನು ಒಳಗೊಂಡಂತೆ ತಾಲೂಕು ಅಭಿವೃದ್ಧಿ ಸಮಿತಿ ರಚಿಸಿ ತಾಲೂಕನ್ನು ಅಭಿವೃದ್ಧಿಗೊಳಿಸುವ ಕ್ರಿಯಾ ಯೋಜನೆ ಸಿದ್ಧಪಡಿಸುವುದು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗುರಿಯಾಗಿದ್ದು, ಕರುನಾಡು ಕಟ್ಟೋಣ ಅಭಿಯಾನದ ಕಾರ್ಯಕ್ರಮವಾಗಿದೆ. ಈ ಅಭಿಯಾನದ ಮೂಲಕ ತಾಲ್ಲೂಕಿನ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಈಡೇರಿಸಲು ಪಕ್ಷವು ಪಣ ತೊಡುತ್ತದೆ. ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂದು ತಿಪಟೂರು ತಾಲೂಕು ಸಂಭಾವ್ಯ ಅಭ್ಯರ್ಥಿ ಗಂಗಾಧರ ಕರಿಕೆರೆ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ತಾಲೂಕು ಉಪಾಧ್ಯಕ್ಷ ರುದ್ರಾ ಆರಾದ್ಯ, ಕಾರ್ಯದರ್ಶಿಗಳಾದ ಮಹಾದೇವಯ್ಯ, ಗೊಪಿನಾಥ್, ಶಿವಕುಮಾರ್, ಸತೀಶ್ ಬಿ.ಟಿ., ಯುವ ಘಟಕದ ಪ್ರಜ್ವಲ್, ರೋಹನ್ ಕರಿಕೆರೆ ಮುಂತಾದವರಿದ್ದರು.