ತುರುವೇಕೆರೆ :
ದೆಬ್ಬೇಘಟ್ಟ ಹೋಬಳಿಯಲ್ಲಿ ಏತ ನೀರಾವರಿ ಅವೈಜ್ಞಾನಿಕವಾಗಿದ್ದು ಅದನ್ನು ಆಧುನೀಕರಣಗೊಳಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಲು ಈಗಿನ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಜಿ ವಿದಾನ ಪರಿಷತ್ತು ಸದಸ್ಯ ಬೆಮೆಲ್ ಕಾಂತರಾಜು ತಿಳಿಸಿದರು.
ತಾಲ್ಲೂಕಿನ ದೆಬ್ಬೇಘಟ್ಟ ಹೋಬಳಿ ಗೊಟ್ಟೀಕೆರೆ ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರೊಡಗೂಡಿ ಕೆರೆಗೆ ಬಾಗಿನ ಅರ್ಪಿಸಿದ ಸಂಧರ್ಭದಲ್ಲಿ ಮಾತನಾಡಿದ ಅವರು ಸುಮಾರು 22 ವರ್ಷಗಳಿಂದಲೂ ಜೀವನಾಡಿ ಗೊಟ್ಟೀಕೆರೆ ಕೆರೆಗೆ ನೀರು ಬಾರದೆ ಈ ಭಾಗದ ಜನತೆ ಅತ್ಯಂತ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರು. ಜನಜಾನುವಾರುಗಳಿಗೆ ನೀರಿನ ಅಭಾವವಿತ್ತು. ಇದೀಗ ಭಗವಂತನ ಕೃಪೆಯಿಂದ ಮಳೆಯಿಂದಲೇ ಈ ಬಾರಿ ಕೆರೆ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರ ಆಮಂತ್ರಣದ ಮೇರೆಗೆ ಇಂದು ಕೆರೆಗೆ ಬಾಗಿನ ಅರ್ಪಿಸಿದ್ದೇವೆ. ಹೀಗೆಯೆ ಪ್ರತಿವರ್ಷ ಕೆರೆ ತುಂಬಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಈ ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗುವುದು. ಹಾಗೆಯೆ ಅತಿವೃಷ್ಟಿಯಿಂದ ಈ ಬಾರಿ ಎಲ್ಲಾ ಕಡೆ ಕೆರೆಕಟ್ಟೆಗಳು ತುಂಬಿ ಕೋಡಿ ಹೋಗುತ್ತಿದ್ದು ಕೆಲ ಗ್ರಾಮಗಳಿಗೆ ಸಂಪರ್ಕ ಕಡಿದಿವೆ. ದಯಮಾಡಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಹೆಚ್ಚು ನೀರು ಹರಿವ ರಸ್ತೆಗಳಿಗೆ ಬ್ಯಾರಿ ಕೇಡ್ ಅಥವಾ ತಡೆಗೋಡೆ ಹಾಕಿ ಜನತೆಗೆ ರಕ್ಷಣೆ ನೀಡಲು ಸೂಕ್ತಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುವುದಾಗಿ ತಿಳಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ ಸುಮಾರು ವರ್ಷಗಳಿಂದಲೂ ತುಂಬದ ಗೊಟ್ಟೀಕೆರೆ ಕೆರೆ ಈ ಬಾರಿ ಮಳೆಯಿಂದ ಪೂರ್ಣಪ್ರಮಾಣದಲ್ಲಿ ತುಂಬಿ ಕೋಡಿ ಬಿದ್ದಿರುವುದು ಈ ಬಾಗದ ರೈತರಿಗೆ ಹರ್ಷ ತಂದಿದ್ದು ಮುಂದಿನ ದಿನಗಳಲ್ಲಿಯೂ ಹೀಗೆಯೆ ಕೆರೆ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶಶಿಸೇಕರ್, ಕೊಳಾಲ ಶಿವರಾಜು, ಗೋಪಾಲ್‍ಗೌಡ, ಶಿವಕುಮಾರ್, ವಿಜಯ್, ಮಂಜಣ್ಣ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.