ತುರುವೇಕೆರೆ
ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಐಕ್ಯತಾ ಯಾತ್ರೆ ಪ್ರಾರಂಭಿಸಿದ್ದು, ಪಾದಯಾತ್ರೆ ಮುಖಾಂತರ ಅಕ್ಟೋಬರ್ 9 ರಂದು ತುರುವೇಕೆರೆ ತಾಲ್ಲೂಕಿನಿಂದ ತುಮಕೂರು ಜಿಲ್ಲೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ ಅವರ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾರತ್ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ರಾಷ್ಟ್ರಧ್ವಜ ನೀಡಿದ್ದು ಕಾಂಗ್ರೆಸ್ ಪಕ್ಷ. ಈ ಪಕ್ಷ ಉಳಿದಿರುವುದು ಕಾಂಗ್ರೆಸ್ ಕಾರ್ಯಕರ್ತರಿಂದಲೇ ಹೊರತು ಯಾವುದೇ ಮುಖಂಡರಿಂದಲ್ಲ. ಸ್ವಾತಂತ್ರ್ಯಕ್ಕಾಗಿ ಈ ರಾಷ್ಟ್ರಕ್ಕೆ ಬಿ.ಜೆ.ಪಿ. ಯವರ ಕೊಡುಗೆ ಶೂನ್ಯ. ತಾಲೂಕಿನಲ್ಲಿ ಹಲವಾರು ವಿಧಾನ ಸಭೆ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನಾನು ಕೆ.ಪಿ.ಸಿ.ಸಿ ಅಧ್ಯಕ್ಷನಾಗಿ ಯಾರಿಗೂ ಟಿಕೆಟ್ ನೀಡುವ ಭರವಸೆ ನೀಡುವುದಿಲ್ಲ. ಮೊದಲು ಪಕ್ಷ ಸಂಘಟಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ನಂತರ ತಾನೇ ತಾನಾಗಿ ಎಲ್ಲಾ ಆಕಾಂಕ್ಷಿಗಳಿಗೂ ಒಂದಲ್ಲ ಒಂದು ಅಧಿಕಾರ ಸಿಕ್ಕೇ ಸಿಗುತ್ತದೆ ಎಂದು ಆಕಾಂಕ್ಷಿಗಳಿಗೆ ಒಗ್ಗಟಿನ ಪಾಠ ಮಾಡಿದರು.
ರಾಹುಲ್ ಗಾಂಧಿಯವರು ತುಮಕೂರು ಜಿಲ್ಲೆಗೆ ಪಾದಾರ್ಪಣೆ ಮಾಡುತ್ತಿರುವುದು ತುರುವೇಕೆರೆ ತಾಲ್ಲೂಕಿನಿಂದ ಈ ತಾಲ್ಲೂಕಿನಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, ಯುವಕರು ಪಾದಯಾತ್ರೆಯಲ್ಲಿ ಅವರ ಜೊತೆ ನಡೆಯಬೇಕು. ಈ ಪುಣ್ಯದ ಕೆಲಸದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷ ಕಟ್ಟುವ ನಿಟ್ಟಿನಲ್ಲಿ ಮುಂದಾಗಿ ಎಂದರು.
ಪಕ್ಷದ ಮುಖಂಡರುಗಳು ಪ್ಲೆಕ್ಸ್‍ಗಳಲ್ಲಿ ನಮ್ಮಗಳ ಫೋಟೋ ಇಲ್ಲ ಎಂದು ಗೊಂದಲಕ್ಕೀಡಾಗಬೇಡಿ, ಮಾಯಸಂದ್ರ ಗಡಿಯಿಂದ ಕಲ್ಲೂರಿನ ಗಡಿ ಭಾಗದವರೆಗೂ ನಿಮಗೆ ಇಷ್ಟಬಂದಂತೆ ನಿಮ್ಮಗಳ ಫೋಟೋ ಬ್ಯಾನರ್ ಹಾಕಿಕೊಳ್ಳಿ, ಇದಕ್ಕೆ ನಮ್ಮ ಅಭ್ಯಂತರ ಇಲ್ಲವೆಂದರು. ಆದರೆ ಪಕ್ಷದಲ್ಲಿ ಗೊಂದಲ ಉಂಟುಮಾಡಬೇಡಿ, ಪಕ್ಷದಲ್ಲೇ ಇದ್ದು ಪಕ್ಷವಿರೋಧಿ ಚಟುವಟಿಕೆ ಮಾಡಬೇಡಿ, ಬೇಕಾದರೆ ಪಕ್ಷದಿಂದ ಹೊರ ಹೋಗುವವರು ಈಗಲೇ ಹೋಗಬಹುದು, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದರು.
ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಚೌದ್ರಿ ರಂಗಪ್ಪ, ವಸಂತ್ ಕುಮಾರ್ ಟಿ.ಎನ್., ಶಿವರಾಜ್, ಗೀತಾ ರಾಜಣ್ಣ, ಸುಬ್ರಮಣಿ ಶ್ರೀಕಂಠೇಗೌಡ, ಎನ್.ಆರ್. ಜಯರಾಮ್, ಬೆಮೆಲ್ ಕಾಂತರಾಜ್ ಎಲ್ಲರನ್ನೂ ವೇದಿಕೆ ಮುಂಭಾಗಕ್ಕೆ ಕರೆಸಿ ಎಲ್ಲರಿಗೂ ಪಕ್ಷದ ವಿರುದ್ದ ಕೆಲಸ ಮಾಡುವುದಿಲ್ಲವೆಂದು ಒಟ್ಟಾಗಿ ಪಕ್ಷ ಕಟ್ಟುತ್ತೇವೆನ್ನುವ ಪ್ರಮಾಣ ಮಾಡಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಮಾತನಾಡಿ, ರಾಹುಲ್ ಗಾಂಧಿಯವರು ತಾಲೂಕಿಗೆ ಆಗಮಿಸುವ ದಿನ ಇತಿಹಾಸದ ದಿನವಾಗಬೇಕು. ಈ ರಾಷ್ಟ್ರದಲ್ಲಿ ಎಲ್ಲಾ ಜನಾಂಗವನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ಪಕ್ಷ ಕಾಂಗ್ರೆಸ್ ಪಕ್ಷ ಎಂದರು. ಕ್ಷೇತ್ರದಲ್ಲಿ ಕಾಂಗ್ರಸ್ ಪಕ್ಷಕ್ಕೆ ಶಕ್ತಿ ನೀಡಿ, ರಾಜ್ಯದಲ್ಲಿ ಮೊದಲು ಅಧಿಕಾರಕ್ಕೆ ತನ್ನಿ ಎಂದು ವಿನಂತಿಸಿದರು.
ಚೌದ್ರಿ ರಂಗಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸಿದಾಗೆಲ್ಲಾ ಅಧಿಕಾರಕ್ಕೆ ಬಂದಿದೆ ರಾಹುಲ್ ಗಾಂಧಿಯವರು ಭಾರತ ಐಕ್ಯತೆಗಾಗಿ ಪಾದಯಾತ್ರೆ ನಡೆಸುತ್ತಿರುವುದು ನಮ್ಮ ಪಕ್ಷಕ್ಕಾಗೇ ಹೊರತು ಸ್ವಂತಕ್ಕಾಗಿ ಅಲ್ಲ ನಾವೆಲ್ಲರೂ ಭಿನ್ನಾಭಿಪ್ರಯಾಮ ಮರೆತು ಒಗ್ಗಟಾಗಿ ಕಾಂಗ್ರೆಸ್ ಪಕ್ಷ ಕಟ್ಟೋಣ ಎಂದರು.
ಈ ಪೂರ್ವಭಾವಿ ಸಭೆಯಲ್ಲಿ ತಿಪಟೂರು ಮಾಜಿ ಶಾಸಕರಾದ ಕೆ. ಷಡಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ತಿಪಟೂರು ಲೋಕೇಶ್ವರ್, ರಾಯಸಂದ್ರ ರವಿಕುಮಾರ್, ಪಾವಗಡ ವೆಂಕಟೇಶ್, ಮುರಳೀಧರ್ ಹಾಲಪ್ಪ, ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತಿ ಗಣೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಮುಖಂಡ ಗೋಪಿನಾಥ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹನುಮಂತಯ್ಯ, ಗೋಣಿತುಮಕೂರು ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಹೆಚ್.ಕೆ. ನಾಗೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು.