ಗುಬ್ಬಿ


ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನಾದ್ಯಂತ ವಿತರಣೆಯಾದ ಸಮವಸ್ತ್ರಗಳು ಸರಿಯಾದ ಗುಣಮಟ್ಟವಿಲ್ಲದೆ ಹೆಣ್ಣುಮಕ್ಕಳಿಗೆ ನೀಡಿರುವ ಸಮವಸ್ತ್ರದಲ್ಲಿ ಮಕ್ಕಳ ದೇಹವು ಕಾಣುವಂತಾಗಿದ್ದು ಇದನ್ನು ಕಂಡು ಕಾಣದಂತಿರುವ ಬಿ.ಇ.ಓ ಸೋಮಶೇಖರ್‍ರವರ ಪಾಲು ಎಷ್ಟು ?
ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಮವಸ್ತ್ರವನ್ನು 1-2, 3-4, 5-7, 8-10ನೇತರಗತಿ ವಿದ್ಯಾರ್ಥಿಗಳಿಗೆ ಒಂದೊಂದು ಅಳತೆಯ ಸಮವಸ್ತ್ರವನ್ನು ಸರ್ಕಾರವು ನೀಡುತ್ತಿದ್ದು ಶಾಲೆ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಓದುವಂತಹ ಮಕ್ಕಳಿಗೆ ಸಮವಸ್ತ್ರವಿಲ್ಲದೆ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಶಾಲೆಗೆ ಬರುತ್ತಿದ್ದರು. ಇದ್ದಕ್ಕಿದ ಹಾಗೆ ಸರ್ಕಾರವು ಸಮವಸ್ತ್ರವನ್ನು ತಾಲ್ಲೂಕಿನಾದ್ಯಂತ ಇರುವ ಶಾಲೆಯ ಒಟ್ಟು ಹೆಣ್ಣುಮಕ್ಕಳ ಸಂಖ್ಯೆ 10017 ಹಾಗೂ ಗಂಡು ಮಕ್ಕಳ ಸಂಖ್ಯೆ 10023 ಇದ್ದು, ಈ ಮಕ್ಕಳಿಗೆ ಸಮವಸ್ತ್ರವನ್ನು ನೀಡಿದ್ದು ಈ ಸಮವಸ್ತ್ರವನ್ನು ಧರಿಸಲು ವಿದ್ಯಾರ್ಥಿನಿಯರು ಹಿಂಜರಿಯುತ್ತಿರುವುದಕ್ಕೆ ಮುಖ್ಯ ಕಾರಣ ಕಳಪೆ ಗುಣಮಟ್ಟದ ಸಮವಸ್ತ್ರ. ಈ ರೀತಿಯ ಗುಣಮಟ್ಟವಿಲ್ಲದ ಸಮವಸ್ತ್ರ ನೀಡಿರುವುದು ಯಾವ ಪುರಷಾರ್ಥಕ್ಕಾಗಿ ನಿಮ್ಮ ಮಕ್ಕಳಿಗೂ ಇದೇ ರೀತಿಯ ಬಟ್ಟೆಯನ್ನು ತೊಡಿಸುತ್ತಿರಾ ಎಂದು ಪೋಷಕರು ದೂರಿದ್ದಾರೆ.
ಸಮವಸ್ತ್ರವನ್ನು ಮುಂಬೈ ಮೂಲದ ಖಾಸಗಿ ಕಂಪನಿಯಿಂದ ಟೆಂಡರ್ ಕರೆದ ವ್ಯಕ್ತಿಯಿಂದ ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಸರಬರಾಜು ಮಾಡಿದ್ದು, ಸಮವಸ್ತ್ರ ಬಂದಂತಹ ಸಮಯದಲ್ಲಿ ಕೇತ್ರ ಶಿಕ್ಷಣಾಧಿಕಾರಿಗಳಾಗಲೀ, ಜವಾಬ್ದಾರಿಯುತ ಇತರೆ ಅಧಿಕಾರಿಗಳಾಗಲೀ ಹಾಗೂ ಶಾಲಾ ಮುಖ್ಯಶಿಕ್ಷಕರಾಗಲೀ, ಶಿಕ್ಷಕರಾಗಲೀ ಈ ಸಮವಸ್ತ್ರವನ್ನು ಪರಿಶೀಲಿಸದೆ ಮಕ್ಕಳಿಗೆ ವಿತರಿಸಿರುವುದು ಎಷ್ಟು ಸಮಂಜಸ. ತಮ್ಮ ದಿನನಿತ್ಯದ ಬಟ್ಟೆಯನ್ನು ಒಮ್ಮೆಯಾದರೂ ನೋಡುವ ಅಧಿಕಾರಿಗಳು ಗ್ರಾಮೀಣ ಭಾಗದ ಮಕ್ಕಳಿಗೆ ನೀಡಿರುವ ಈ ಸಮವಸ್ತ್ರವು ಕೇವಲ ಒಂದು ಬಾರಿ ಉಪಯೋಗಿಸಿ ಎಸೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಪೋಷಕರು ಹಾಗೂ ಶಾಲಾಭಿವೃದ್ದಿ ಸಮಿತಿಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಕಳಪೆ ಗುಣಮಟ್ಟದ ಸಮವಸ್ತ್ರದ ಬಟ್ಟೆಯನ್ನು ಕೊಟ್ಟಿರುವ ಬಗ್ಗೆ ಈ ತಿಂಗಳ ಮೊದಲ ವಾರದಲ್ಲೇ ದೂರು ನೀಡಿದ್ದರೂ ಇದುವರೆವಿಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ವಾಸ್ತವವಾಗಿ ಇವತ್ತಿನ ಸಂದರ್ಭದಲ್ಲಿ ಸ್ವಲ್ಪ ಹಣವಿತ್ತೆಂದರೆ ಖಾಸಗಿ ಶಾಲೆಯ ಬಾಗಿಲನ್ನು ತಟ್ಟುವ ಪೋಷಕರ ನಡುವೆ ಕಡುಬಡವರು, ಕೂಲಿ ಕಾರ್ಮಿಕರು, ರೈತಾಪಿ ಜನ ಸರ್ಕಾರಿ ಶಾಲೆಗಳಿಗೆ ವ್ಯಾಸಂಗಕ್ಕಾಗಿ ಸೇರಿಸುವ ಸಂದರ್ಭದಲ್ಲಿ ಇಂತಹ ಕಳಪೆ ಮಟ್ಟದ ವಸ್ತ್ರವನ್ನು ನೀಡುವುದೆಂದರೆ ಅದು ಶಿಕ್ಷಣ ಸಚಿವರ ಜಿಲ್ಲೆಯಲ್ಲೇ ಯಾರೂ ಇದನ್ನು ಗಮನಿಸದೆ ಅಥವಾ ಗಮನಿಸಿ ಮೌನವಾಗಿರುವ ಅಧಿಕಾರಿಗಳ ಬಗ್ಗೆ ಪೋಷಕರು ಹಿಡಿಶಾಪ ಹಾಕುತ್ತಿದ್ದಾರೆ.
ಕೋಟ್ಸ್: ಎನ್.ರವೀಶ್ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಟಿ.ಪಾಳ್ಯ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಿರುವ ಇಲಾಖೆ ಎಂತಹ ಗುಣಮಟ್ಟದ ಬಟ್ಟೆಯನ್ನು ನೀಡಿದೆ ಎಂದರೆ ಹೆಣ್ಣು ಮಕ್ಕಳ ಲೈನಿಂಗ್ ಬಟ್ಟೆಯನ್ನು ಸಮವಸ್ತ್ರಕ್ಕೆಂದು ನೀಡಿದೆ. ಈ ಬಟ್ಟೆಯಿಂದ ಮಕ್ಕಳು ಸಮವಸ್ತ್ರವನ್ನು ಹೊಲೆಸಿಕೊಂಡಲ್ಲಿ ನಮ್ಮ ಮಕ್ಕಳ ಮಾನ ನಾವೇ ಹರಾಜು ಹಾಕಿದಂತೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಇನ್ನೂ ಶಿಕ್ಷಣ ಸಚಿವರ ಗಮನಕ್ಕೆ ತರುವುದು ಬಾಕಿ ಇದೆ.
ಕೋಟ್ಸ್ : ಸೋಮಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುಬ್ಬಿ. ಶಾಲಾ ಸಮವಸ್ತ್ರವನ್ನು ರಾಜ್ಯಮಟ್ಟದಿಂದ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ಸರಬರಾಜು ಮಾಡುತ್ತಿದ್ದು, ಇದು ಸ್ಥಳೀಯವಾಗಿ ನಾವ್ಯಾರೂ ಗುಣಮಟ್ಟದ ಪರೀಕ್ಷೆಯನ್ನು ಇಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಕೆಲವು ಶಾಲೆಗಳಿಗೆ ಮೌಖಿಕವಾಗಿ ಬಣ್ಣಬಿಟ್ಟಿರುವ ಬಟ್ಟೆಗಳು ಹಾಗೂ ಲೈನಿಂಗ್ ರೀತಿಯ ಬಟ್ಟೆಗಳು ಸರಬರಾಜಾಗಿರುವುದು ನನ್ನ ಗಮನಕ್ಕೆ ಬಂದಿದ್ದರೂ ಏನೂ ಮಾಡದ ಸ್ಥಿತಿಯಲ್ಲಿದ್ದೇನೆ ಎಂದು ತಮ್ಮ ಅಸಹಾಯಕತೆಯ ಮಾತುಗಳನ್ನಾಡಿದರು.

 

(Visited 3 times, 1 visits today)